ಶೆಲ್ ಫಿಶ್ ಬೇಟೆ ಜೋರು – ನದಿಗೆ ಧುಮುಕಿದ ಮತ್ಸ್ಯಪ್ರಿಯರು

ಉಡುಪಿ: ನಾಡದೋಣಿ ಮೀನುಗಾರಿಕೆಗೆ ಸರ್ಕಾರ ಅವಕಾಶ ನೀಡಿದ್ದೇ ತಡ ಕರಾವಳಿಯ ಮೀನುಗಾರರು ನದಿಗೆ ಧುಮುಕಿದ್ದಾರೆ. ಸಮುದ್ರ ಸೇರುವ ಮುನ್ನ ಚಿಪ್ಪು ಮೀನು ಹಿಡಿಯುತ್ತಿದ್ದಾರೆ.

ಕರಾವಳಿ ಜನ ಕಳೆದ 15 ದಿನದಿಂದ ಮೀನು ಸಿಗದೆ ಕಂಗಾಲಾಗಿದ್ದಾರೆ. ಪ್ರತಿದಿನ ಮೀನು ತಿನ್ನುತ್ತಿದ್ದವರಿಗೆ ತರಕಾರಿ ತಿನ್ನೋದು ಅಂದರೆ ಬಹಳ ಕಷ್ಟ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಸಾವಿರಾರು ಜನ ಜಮಾಯಿಸುವುದರಿಂದ ಆಳಸಮುದ್ರ ಮತ್ತು ಪರ್ಸಿನ್ ಮೀನುಗಾರಿಕೆಯನ್ನು ಜಿಲ್ಲಾಡಳಿತ ತಡೆ ಹಿಡಿದಿತ್ತು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಸಾಧ್ಯವಾದಾಗ ಡಿಸಿ ಖಡಕ್ ಕ್ರಮ ಕೈಗೊಂಡಿದ್ದರು. ಈ ಆದೇಶದಿಂದ ಮತ್ಸ್ಯಪ್ರಿಯರು ಒಣ ಮೀನಿನ ಕಡೆ ಮುಖ ಮಾಡಿದ್ದರು.

ಮೀನುಗಾರಿಕೆಗೆ ಸರ್ಕಾರದ ಆದೇಶದ ನಂತರ ಇದೀಗ ಮಹಿಳೆಯರು ಮಕ್ಕಳೂ ನದಿಗಿಳಿದು ಮರುವಾಯಿ ಹೆಕ್ಕುತ್ತಿದ್ದಾರೆ. ಸಿಕ್ಕಾಪಟ್ಟೆ ಟೇಸ್ಟಿಯಾಗಿರುವ ಈ ಶೆಲ್ ಫಿಶ್‍ಗೆ ಈಗ ಭಾರೀ ಡಿಮ್ಯಾಂಡ್ ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಇದೀಗ ಇದು ಟೈಂ ಪಾಸ್ ಹಾಬಿಯಾಗಿ ಮಾರ್ಪಾಡಾಗಿದೆ. ಬೆಳಗ್ಗೆ ಸಂಜೆ ಜನ ನದಿ, ತೊರೆಗೆ ಇಳಿದು ಮರುವಾಯಿ ಬಾಚಿಕೊಳ್ಳುತ್ತಿದ್ದಾರೆ.

ಮರುವಾಯಿ ಹೆಕ್ಕುತ್ತಿದ್ದ ವಾಮನ್ ಮಾತನಾಡಿ, ದಿನದ ಒಂದು ಊಟಕ್ಕಾದರೂ ಮೀನು ಬೇಕೇಬೇಕು. ಫ್ರೆಶ್ ಮೀನು ಮಾರ್ಕೆಟ್‍ಗೆ ಬರುತ್ತಿಲ್ಲ. ಹಾಗಾಗಿ ಗೆಳೆಯರೆಲ್ಲ ಉದ್ಯಾವರ ನದಿಗೆ ಇಳಿದಿದ್ದೇವೆ. ಚಿಪ್ಪು ಹಿಡಿಯುತ್ತಿದ್ದೇವೆ ಎಂದು ಹೇಳಿದರು. ಪ್ರವೀಣ್ ಮತ್ತು ಗಣೇಶ್ ಮಾತಮಾಡಿ, ಚಿಪ್ಪಿನೊಳಗೆ ಇರುವ ಸಣ್ಣ ಪ್ರಮಾಣದ ಮಾಂಸವನ್ನು ಟೇಸ್ಟ್ ಮಾಡಿದವರಿಗೆ ಗೊತ್ತು. ಬೇರೆ ಸಮಯದಲ್ಲಿ ಇದಕ್ಕೆ ಅಷ್ಟೊಂದು ಡಿಮ್ಯಾಂಡಿಲ್ಲ. ಈಗ ಬಹಳ ಬೇಡಿಕೆ ಇದೆ ಎಂದರು.

ಮರುವಾಯಿ ಸಾರು ಮತ್ತು ಡ್ರೈ ಸುಕ್ಕದ ಜೊತೆ ನೀರ್ ದೋಸೆ ಸೂಪರ್ ಕಾಂಬಿನೇಶನ್. ಕುಚ್ಚಿಲು ಅನ್ನದ ಜೊತೆಗೂ ಬಹಳ ಟೇಸ್ಟ್ ಆಗುತ್ತದೆ. ಕರಾವಳಿ ಜಿಲ್ಲೆ ಉಡುಪಿಯ ನದಿಯಲ್ಲಿ ಸಿಗುವ ಮರುವಾಯಿ ಮಾರುಕಟ್ಟೆ ಸೇರದೆ ಸೀದಾ ಅಡುಗೆ ಮನೆ ಸೇರುತ್ತಿದೆ. ನಾಡದೋಣಿ ಸಮುದ್ರಕ್ಕೆ ಇಳಿದ ಮೇಲೆ ಜನಕ್ಕೆ ತಾಜಾ ಮೀನುಗಳು ಸಿಗಲಿವೆ.

Comments

Leave a Reply

Your email address will not be published. Required fields are marked *