ವಿಜಯಪುರದಲ್ಲಿ ಕೊರೊನಾ ಸೋಂಕಿತ ವೃದ್ಧೆಯ ಪತಿ ಸಾವು

ವಿಜಯಪುರ: ಕೊರೊನಾ ಸೋಂಕಿತ ವೃದ್ಧೆಯ ಪತಿ ಭಾನುವಾರ ರಾತ್ರಿ ಮೃತಪಟ್ಟಿದ್ದು, ಸೋಂಕಿಗೆ ಬಲಿಯಾಗಿರಬಹುದೇ ಎನ್ನುವ ಪ್ರಶ್ನೆ ಎದ್ದಿದೆ.

ಇಂದು ಮಧ್ಯಾಹ್ನ ವೃದ್ಧೆಗೆ ಪಾಸಿಟಿವ್ ಬಂದಿತ್ತು. ಈ ಬೆನ್ನಲ್ಲೇ ವೃದ್ಧೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಒಟ್ಟು 24 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಇಂದು ರಾತ್ರಿ ವೃದ್ಧೆಯ ಪತಿ(69) ಮೃತಪಟ್ಟಿದ್ದಾರೆ.

ಕೊರೊನಾಗೆ ವೃದ್ಧ ಮೃತಪಟ್ಟಿದ್ದಾರೋ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಸಾವಿಗೀಡಾದ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ವರದಿಗೆ ವಿಜಯಪುರ ಜಿಲ್ಲಾಡಳಿತ ಈಗ ಕಾಯುತ್ತಿದೆ.

ಶನಿವಾರ ರಾತ್ರಿ ದಿಢೀರ್ ಆಗಿ ರಾಜ್ಯ ಸರ್ಕಾರ ನಗರದ ಚಪ್ಪರ ಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಲು ಸೂಚನೆ ನೀಡಿತ್ತು. ಕೂಡಲೇ ಜಿಲ್ಲಾಡಳಿತ ಚಪ್ಪರಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಿತ್ತು. ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಈ ಚಪ್ಪರ ಬಂದ್ ಕಾಲೋನಿ ನಿವಾಸಿ 60 ವರ್ಷದ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದನ್ನು ರಾಜ್ಯ ಸರಕಾರ ದೃಢ ಪಡಿಸಿತ್ತು.

ವೃದ್ಧನ ಕುಟುಂಬ ಅವಿಭಾಜ್ಯ ಕುಟುಂಬ ಆಗಿದ್ದು, ಮನೆಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 24 ಜನರು ಇದ್ದಾರೆ. ಒಟ್ಟು 22 ಜನರ ಗಂಟಲು ದ್ರವವನ್ನ ಪರೀಕ್ಷೆಗೆ ಕಳಿಸಲಾಗಿದೆ. ಪಾಸಿಟಿವ್ ಬಂದಿದ್ದ ವೃದ್ಧೆ ಮನೆ ಬಿಟ್ಟು ಎಲ್ಲೂ ಹೋಗಿರಲಿಲ್ಲ. ಆದರೆ ಪತಿ ಮಹಾರಾಷ್ಟ್ರದಲ್ಲಿ ಸಂಬಂಧಿಕರ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಅಲ್ಲಿಂದಲೇ ಕೊರೋನಾ ಬಂದಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.

ಸೋಂಕಿತ ವೃದ್ಧೆ ಏಪ್ರಿಲ್ 6ರಂದು ಎರಡು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಲ್ಲಿಯು ಕೂಡ ಚಿಕಿತ್ಸೆ ನೀಡಿದ್ದರೂ ಗುಣಮುಖವಾಗಿರಲಿಲ್ಲ. ಈ ವೇಳೆ ಆಸ್ಪತ್ರೆಯವರಿಗೆ ಕೋವಿಡ್-19 ಇರುವ ಶಂಕೆ ಕಂಡುಬಂದು ಏಪ್ರಿಲ್ 9 ರಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಆಗ ವೃದ್ಧೆಯನ್ನು ಜಿಲ್ಲಾಸ್ಪತ್ರೆ ದಾಖಲಿಸಿ ಜಿಲ್ಲಾಡಳಿತ ಗಂಟಲು ದ್ರವ ಪರೀಕ್ಷೆಗೆ ಕಳಿಸಿತ್ತು. ವೃದ್ಧೆಯ ಆರೋಗ್ಯದಲ್ಲಿ ಏರುಪೇರಾಗಿದ್ದು ಈಗ ವೆಂಟಿಲೇಟರಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗತ್ತಿದೆ.

ಈ ಒಂದು ಪ್ರಕರಣದಿಂದಲೇ ದಿಗಿಲು ಬಡದಿದ್ದ ವಿಜಯಪುರ ಜನೆತೆಗೆ ಸಂಜೆ ಮತ್ತೊಂದು ಸಿಡಿಲು ಬಡಿದ ಸುದ್ದಿ ಬಂದು ಅಪ್ಪಳಿಸಿತ್ತು. ಈ ವೃದ್ಧಗೆ ಸಂಬಂಧವೇ ಇಲ್ಲ ಬೇರೆ ಕುಟುಂಬದ 13 ವರ್ಷ ಹಾಗೂ 10 ವರ್ಷದ ಬಾಲಕ ಮತ್ತು 13 ವರ್ಷದ ಬಾಲಕಿ ಸೇರಿ ಐವರಿಗೆ ಕೊರೊನಾ ಸೋಂಕು ತಗುಲಿದೆ. ಈ ಕುಟುಂಬದ ಸದಸ್ಯರೊಬ್ಬರು ಮಹಾರಾಷ್ಟ್ರಕ್ಕೆ ಹೋಗಿ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪತ್ತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಹೇಳಿದ್ದಾರೆ.

ವೃದ್ಧೆ ಬಗ್ಗೆ ಮಾಹಿತಿ ಕಲೆ ಹಾಕಲು ಹೋಗಿ ಅವರ ಮನೆಯಲ್ಲಿ ಚಹಾ ಕುಡಿದು ಬಂದಿದ್ದ ಗೋಲಗುಂಬಜ್ ಪಿಎಸ್‍ವೈ ಸೇರಿದಂತೆ ಇಬ್ಬರು ಪೇದೆಗಳ ಮೇಲೆ ನಿಗಾ ಇಡಲಾಗಿದೆ. ವೃದ್ಧೆಯ ಚಿಕಿತ್ಸೆಗಾಗಿ ಓಡಾಡಿದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಒಟ್ಟು 100 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

Comments

Leave a Reply

Your email address will not be published. Required fields are marked *