ಎಲ್ಲರೂ ಮನೆಯಲ್ಲಿರಿ, ಯಾರೂ ಅನಗತ್ಯವಾಗಿ ಓಡಾಡ್ಬೇಡಿ: ಜಾವಗಲ್ ಶ್ರೀನಾಥ್

ಮೈಸೂರು: ಕೊರೊನಾ ವೈರಸ್ ಹರಡದಂತೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಟ, ನಟಿಯರು ಸೇರಿದಂತೆ ರಾಜಕೀಯ ನಾಯಕರು ಕೂಡ ಮನೆಯಲ್ಲೇ ಇರಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಖ್ಯಾತ ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಕೂಡ ಜಾಗೃತಿ ಮೂಡಿಸಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿರುವ ಶ್ರೀನಾಥ್, ಕೊರೊನಾ ಪ್ರಪಂಚದಾದ್ಯಂತ ಹಬ್ಬಿ ಬಹಳ ತೊಂದರೆ ಕೊಡುತ್ತಿದೆ. ಈ ಬಗ್ಗೆ ನಮ್ಮ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದು, ಬಹು ಬೇಗನೇ ಲಾಕ್‍ಡೌನ್ ಮಾಡುವ ಮೂಲಕ ಇಂದು ನಾವೆಲ್ಲರೂ ಪರಿಣಾಮಕಾರಿಯಾಗಿರುವ ಸ್ಥಿತಿಯಲ್ಲಿದ್ದೇವೆ. ಇನ್ನೂ ಎರಡು ವಾರ ಕಷ್ಟಪಡಬೇಕಾಬಹುದು. ಆ ಕಷ್ಟ ನಾವೆಲ್ಲರೂ ಪಡೋಣ ಎಂದಿದ್ದಾರೆ.

ಸರ್ಕಾರದ ಎಲ್ಲಾ ನಿರ್ಧಾರಗಳಿಗೂ ನಾವು ಸ್ಪಂದಿಸೋಣ. ಬಹಳ ಮುಖ್ಯವಾದ ವಿಚಾರವೆಂದರೆ ಪೊಲೀಸ್ ಇಲಾಖೆ, ನರ್ಸ್ ಹಾಗೂ ವೈದ್ಯರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದೇ ಕರೆಯಬಹುದು. ಇವರೊಂದಿಗೆ ದಿನಾ ಬೆಳಗ್ಗೆ ಬಂದು ಕಸ ಗುಡಿಸುವ ಪೌರಕಾರ್ಮಿಕರೂ ಕೂಡ ವಾರಿಯರ್ಸ್. ಈ ಮೂಲಕ ಅವರು ದೇಶವನ್ನು ಕ್ಲೀನ್ ಆಗಿ ಇಡುತ್ತಿದ್ದಾರೆ. ಇವರೆಲ್ಲರಿಗೂ ನಮ್ಮ ಕಡೆಯಿಂದ ಒಂದು ಸಹಕಾರ ಆಗಬೇಕು. ಈ ಸಹಕಾರ ಈಡೇರಬೇಕಾದರೆ ನಾವು ತೃಪ್ತಿ ಪಡಿಸಬೇಕು. ಅದೇ ಮನೆ ಬಿಟ್ಟು ಹೊರಗಡೆ ಬರಬಾರದು ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದು, ಅವರಿಗೆ ಚಿರಋಣಿ ಎಂದು ಹೇಳಿದ್ದಾರೆ. ಹಾಗೆಯೇ ವೈದ್ಯರು ಹಾಗೂ ನರ್ಸ್‍ಗಳು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಿಮಗೆ ಯಾವ ರೀತಿಯಲ್ಲಿ ಬೆಂಬ ಬೇಕೋ ಅದೇ ರೀತಿಯಲ್ಲಿ ಜನ ಸ್ಪಂದಿಸುತ್ತಾರೆ. ಒಟ್ಟಿನಲ್ಲಿ ಈ ರೀತಿಯ ಒಳ್ಳೆಯ ಕೆಲಸಗಳಿಂದ ಕೊರೊನಾ ವೈರಸನ್ನು ಈ ಪ್ರಪಂಚದಿಂದ ತೊಲಗಿಸೋಣ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *