ವೃದ್ಧ ಆಶ್ರಮಕ್ಕೂ ತಟ್ಟಿದ ಲಾಕ್‍ಡೌನ್ ಬಿಸಿ – ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ

ಮಡಿಕೇರಿ: ಲಾಕ್‍ಡೌನ್‍ನಿಂದ ಕೂಲಿ ಕಾರ್ಮಿಕರು, ನಿರ್ಗತಿಕರು, ಮಧ್ಯಮ ವರ್ಗಗಳ ಜನತೆ ತೀರಾ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪವಿರುವ ವೃದ್ಧ ಆಶ್ರಮಕ್ಕೂ ಲಾಕ್‍ಡೌನ್ ಬಿಸಿ ತಟ್ಟಿದೆ.

ಸುಂಟಿಕೊಪ್ಪ ಸಮೀಪ ಎನ್‍ಜಿಓ ಸಂಸ್ಥೆಯೊಂದು ನಡೆಸುತ್ತಿರುವ ವಿಕಾಸ್ ಜನಸೇವಾ ಟ್ರಸ್ಟ್‌ಗೂ ಕೊರೊನಾ ಪರಿಣಾಮ ಬೀರಿದೆ. ಕುಟುಂಬದವರಿಂದ ನಿರ್ಲಕ್ಷಿಸಲ್ಪಟ್ಟವರಿಗೆ ಆಶ್ರಯ ನೀಡಿದ್ದ ಸಂಸ್ಥೆ ಲಾಕ್‍ಡೌನ್ ಪರಿಣಾಮವನ್ನು ಎದುರಿಸುತ್ತಿದೆ. ಸಂಸ್ಥೆ ಪ್ರಾರಂಭವಾಗಿ 5 ವರ್ಷಗಳಾಗಿದೆ. ಅಂದಿನಿಂದ ದಾನಿಗಳು ಕೊಡುತ್ತಿದ್ದ ಆರ್ಥಿಕ ನೆರವಿನಿಂದ ನಡೆದುಕೊಂಡು ಹೋಗುತ್ತಿದ್ದ ಸಂಸ್ಥೆಗೆ ಸೂಕ್ತ ಪ್ರಮಾಣದ ಅಗತ್ಯ ವಸ್ತುಗಳಿಲ್ಲದೆ ತೀರ ಸಂಕಷ್ಟವನ್ನು ಎದುರಿಸುತ್ತಿದೆ.

ಆಶ್ರಮದಲ್ಲಿ 22 ಮಂದಿ ವೃದ್ಧರಿದ್ದಾರೆ. ಲಾಕ್‍ಡೌನ್ ನಂತರದಿಂದ ದಿನಸಿ ಪದಾರ್ಥಗಳು, ಅಕ್ಕಿ, ತರಕಾರಿಗಳು, ಗ್ಯಾಸ್ ಸಮರ್ಪಕ ರೀತಿಯಲ್ಲಿ ಬರುತ್ತಿಲ್ಲ. ಇದರಿಂದ ಸರಿಯಾದ ಪ್ರಮಾಣದಲ್ಲಿ ಊಟ ಬಡಿಸಲೂ ಮೀನಾ-ಮೇಷ ಎಣಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ ಪ್ರಸ್ತುತ ಇರುವ ಕಟ್ಟಡಕ್ಕೂ ಪ್ರತಿ ತಿಂಗಳು 15 ಸಾವಿರ ಬಾಡಿಗೆ ಪಾವತಿಸಬೇಕಿದೆ. ಇವರೆಲ್ಲರೂ ವಯೋವೃದ್ಧರು ಆಗಿರುವುದರಿಂದ ಆಗಾಗ ವೈದ್ಯಕೀಯ ತಪಾಸಣೆಯನ್ನು ಮಾಡಿಸಬೇಕಾಗುತ್ತದೆ.

ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಉಚಿತ ಇದೆ. ಆದರೂ ಹೋಗಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಿತರಾಗಿ ಇವರ ಸೇವೆಗೆ ಮುಂದಾಗಬೇಕು. ದಾನಿಗಳು ಹಾಗೂ ಜಿಲ್ಲಾಡಳಿತವೂ ಅಗತ್ಯ ವಸ್ತುಗಳನ್ನು ಪೂರೈಸಿದರೆ ಇವರ ಪೋಷಣೆಗೆ ನೆರವಾಗುತ್ತೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ಯಾವುದೇ ಅನುದಾನವೂ ಬರಲ್ಲ. ದಾನಿಗಳ ಸಹಾಯದಿಂದ ನಡೆಸುತ್ತಿದ್ದ ಸಂಸ್ಥೆಗೆ ಇದೀಗ ತಾತ್ಕಾಲಿಕವಾಗಿ ಸಂಕಷ್ಟ ಎದುರಾಗಿದೆ ಎಂದು ಆಶ್ರಮ ನಡೆಸುವ ರಮೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *