ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ – ಸಮಾಜಕ್ಕೆ ಮಾದರಿಯಾದ ಕುಟುಂಬ

ಚಿಕ್ಕೋಡಿ (ಬೆಳಗಾವಿ): ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದ್ದು, ಸಭೆ ಸಮಾರಂಭ ಮತ್ತು ಮದುವೆಗಳು ರದ್ದಾಗಿವೆ. ಆದರೆ ಬೆಳಗಾವಿಯ ಜೋಡಿಯೊಂದು ಸಾಮಾಜಿಕ ಜಾಲತಾಣದ ಮೂಲಕ ಮದುವೆಯ ನಿಶ್ಚಿತಾರ್ಥ ನೆರವೇರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಹಾಗೂ ಶಿಕ್ಷಕರಾಗಿರುವ ಪ್ರಕಾಶ್ ಪಾಟೀಲ್ ಅವರು ತಮ್ಮ ಪುತ್ರಿ ಆಶಾ ಪಾಟೀಲ್ ಅವರ ನಿಶ್ಚಿತಾರ್ಥವನ್ನು ಬಾಗಲಕೋಟೆಯ ಮಹಾಂತೇಶ್ ಜೊತೆಗೆ ನೆರವೇರಿಸಿದರು. ಅತಿ ಸರಳವಾಗಿ ಸಾಮಾಜಿಕ ಜಾಲತಾಣದ ವಾಟ್ಸಪ್ ವಿಡಿಯೋ ಕರೆ ಮೂಲಕ ನೆರವೇರಿಸಿ ಹೀಗೂ ನಿಶ್ಚಿತಾರ್ಥ ಮಾಡಿಕೊಳ್ಳಬಹುದೆಂದು ತೊರಿಸಿಕೊಟ್ಟಿದ್ದಾರೆ.

ವಧು ಆಶಾ ಅವರು ಮಾಹಿತಿ ತಂತ್ರಜ್ಞಾನ ವಿಭಾಗದ ಉದ್ಯೋಗಿಯಾಗಿದ್ದು, ಎರಡು ತಿಂಗಳ ಹಿಂದೆ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿತ್ತು. ಆದರೆ ಕೊರೊನಾ ಭೀತಿಯು ಅದ್ದೂರಿ ನಿಶ್ಚಿತಾರ್ಥಕ್ಕೆ ಅಡ್ಡಿಯಾಗಿತ್ತು. ಲಾಕ್‍ಡೌನ ಆದೇಶದಿಂದ ನಿಶ್ಚಿತಾರ್ಥ ಸಮಾರಂಭ ಹೇಗೆ ಮಾಡುವುದು ಎಂದು ಕುಟುಂಸ್ಥರು ಯೋಚಿಸಲು ಆರಂಭಿಸಿದ್ದರು. ಆಗ ಆಶಾ ಅವರಿಗೆ ಯೋಚನೆಗೆ ಬಂದಿದ್ದು, ಆನ್‍ಲೈನ್ ನಿಶ್ಚಿತಾರ್ಥ.

ಆಶಾ ಅವರ ವಿಚಾರಕ್ಕೆ ಕುಟುಂಬಸ್ಥರು ಒಪ್ಪಿಕೊಂಡು ಸರಳವಾಗಿ ವಾಟ್ಸಪ್ ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿ ಕೊವಿಡ್-19 ಹರಡುವುದನ್ನು ತಡೆಯಲು ಕೈ ಜೋಡಿಸಿದ್ದಾರೆ. ಈ ಸರಳ ನಿಶ್ಚಿತಾರ್ಥ ಸಮಾರಂಭಕ್ಕೆ ಪ್ರಕಾಶ್ ಪಾಟೀಲ್ ಅವರ ಕುಟುಂಬದಿಂದ ಕೇವಲ 14 ಸದಸ್ಯರು ಭಾಗಿಯಾಗಿದ್ದು, ಎಲ್ಲರೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿಕೊಂಡು ಸರ್ಕಾರದ ಆದೇಶವನ್ನು ಪಾಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರೆಗೆ ಬೆಂಬಲ ಸೂಚಿಸಿದ್ದಾರೆ.

ಕೊವಿಡ್-19 ಹರಡದಂತೆ ಸರ್ಕಾರ ಕೈಗೊಂಡ ಲಾಕ್‍ಡೌನ ಆದೇಶದಿಂದ ಬಹುತೇಕ ಮದುವೆ,ನಿಶ್ಚಿತಾರ್ಥಗಳನ್ನು ಮುಂದೂಡಲಾಗಿದೆ. ಆದರೆ ಸಂಕೇಶ್ವರದ ಪಾಟೀಲ್ ಕುಟುಂಬ ಸರ್ಕಾರದ ಆದೇಶ ಪಾಲನೆಯ ಜೊತೆಗೆ ವಿನೂತನವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *