76 ದಿನಗಳ ಲಾಕ್‍ಡೌನ್ ತೆರವು – ವುಹಾನ್‌ನಲ್ಲಿ ಲೈಟ್ ಶೋ, ಪ್ರಜೆಗಳ ಆನಂದ ಭಾಷ್ಪ

– ಶೇ.97 ರಷ್ಟು ಅಂಗಡಿಗಳು ಓಪನ್
– ರಸ್ತೆ, ರೈಲು, ವಾಯು ಮಾರ್ಗಗಳ ಸಂಚಾರ ಆರಂಭ

ಬೀಜಿಂಗ್: ಆಪ್ತರ ಜೊತೆ ವಿಡಿಯೋ ಕಾಲಿಂಗ್ ವೇಳೆ ಆನಂದ ಭಾಷ್ಪ, ಹಾಡುಗಳನ್ನು ಹಾಡಿ ನೃತ್ಯ ಮಾಡಿ ಸಂಭ್ರಮ, ಲ್ಯಾಂಡ್ ಆದ ವಿಮಾನಕ್ಕೆ ವಾಟರ್ ಸೆಲ್ಯೂಟ್, ಬಹುಮಹಡಿ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳ ನರ್ತನ. ಆತ್ಮೀಯರು ಸಿಕ್ಕಾಗ ಪ್ರೀತಿಯ ಅಪ್ಪುಗೆ… ಇದು 76 ದಿನಗಳ ಬಳಿಕ ಚೀನಾದ ಉಹಾನ್ ನಗರದಲ್ಲಿ ಕಂಡು ಬಂದ ದೃಶ್ಯ.

ವಿಶ್ವದೆಲ್ಲೆಡೆ ಸಾವಿರಾರು ಜನರ ಸಾವಿಗೆ ಕಾರಣವಾದ ಕೊರೊನಾ ವೈರಸ್ಸಿನ ಉಗಮ ಸ್ಥಾನ ಚೀನಾದ ಹುಬೇ ಪ್ರಾಂತ್ಯದ ರಾಜಧಾನಿ ಉಹಾನ್ ನಲ್ಲಿದ್ದ 76 ದಿನಗಳ ಲಾಕ್‍ಡೌನ್ ಮಂಗಳವಾರಕ್ಕೆ ಅಂತ್ಯವಾಗಿದೆ. ಲಾಕ್‍ಡೌನ್ ಅಂತ್ಯವಾಗಿದ್ದೇ ತಡ ಬುಧವಾರದಿಂದ ಜನ ಸಂಭ್ರಮದಿಂದ ವುಹಾನ್ ನಗರದಲ್ಲಿ ಸುತ್ತಾಡುತ್ತಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದರೆ ವುಹಾನ್ ನಗರದ ಶೇ.97 ರಷ್ಟು ಅಂಗಡಿಗಳು ತೆರೆದಿದೆ. ಅಂಗಡಿಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸುವುದರ ಜೊತೆ ವಿಡಿಯೋ ಕಾಲಿಂಗ್ ಮಾಡುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಿದ ಗ್ರಾಹಕರಿಗೆ ಮಾತ್ರ ಅಂಗಡಿಗಳ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿ ಸುತ್ತಾಡುತ್ತಿದ್ದಾರೆ. ಅಂಗಡಿ ಪ್ರವೇಶಕ್ಕೂ ಮುನ್ನ ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡಲಾಗುತ್ತದೆ.

ಲಾಕ್‍ಡೌನ್ ತೆರವಾಗುತ್ತಿದ್ದಂತೆ ರಾತ್ರಿಯೇ ಜನ ರಸ್ತೆಗೆ ಕಾರನ್ನು ಇಳಿಸಿದ್ದಾರೆ. ಲೇಸರ್ ಲೈಟ್‍ಗಳು ಮತ್ತೆ ಬೆಳಗುವ ಮೂಲಕ ಜನರನ್ನು ಸ್ವಾಗತಿಸಿವೆ. ಎರಡೂವರೆ ತಿಂಗಳ ಕಾಲ ‘ಮೌನ’ಕ್ಕೆ ಶರಣಾಗಿದ್ದ ಗಗನಚುಂಬಿ ಕಟ್ಟಡಗಳ ದೀಪಗಳು ‘ನೃತ್ಯ’ ಮಾಡಿ ರಂಜಿಸಲು ಆರಂಭಿಸಿವೆ.

ರಸ್ತೆ, ರೈಲು, ವಾಯು ಸೇವೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಬಂದು ಲಾಕ್ ಆಗಿದ್ದ ಸಾವಿರಾರು ಜನ ತಮ್ಮ ಊರುಗಳಿಗೆ ತೆರಳಿದ್ದಾರೆ. ಚೀನಾದ ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ, ಶೆಂಜೀನ್ ಗೆ ರೈಲು ಸೇವೆ ಆರಂಭಗೊಂಡಿದೆ.

ಕೊರೊನಾ ವೈರಸ್‍ನಿಂದಾಗಿ ಮುಚ್ಚಲ್ಪಟ್ಟ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಲ್ಯಾಂಡ್ ಆಗಿದೆ. ಸಾಧಾರಣವಾಗಿ ಹೊಸ ವಿಮಾನ ಲ್ಯಾಂಡ್ ಆದಾಗ ವಾಟರ್ ಸೆಲ್ಯೂಟ್ ನೀಡಲಾಗುತ್ತದೆ. ಆದರೆ 76 ದಿನಗಳ ಬಳಿಕ ಲ್ಯಾಂಡ್ ಆದ ಪ್ರಯಾಣಿಕ ವಿಮಾನಕ್ಕೆ ವಾಟರ್ ಸೆಲ್ಯೂಟ್ ನೀಡುವ ಮೂಲಕ ಸ್ವಾಗತಿಸಲಾಯಿತು.

ಚೀನಾದಲ್ಲಿ ಮದುವೆ ಆಗಬೇಕಾದರೆ ಆನ್‍ಲೈನ್ ನಲ್ಲಿ ನೊಂದಣಿ ಮಾಡಬೇಕು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಆನ್‍ಲೈನ್ ನೋಂದಣಿಯನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಹಲವು ಜೋಡಿಗಳು ಮದುವೆಯಾಗಿರಲಿಲ್ಲ. ಏಪ್ರಿಲ್ 3 ರಿಂದ ನೋಂದಣಿ ಮಾಡಲು ಅನುಮತಿ ಸಿಕ್ಕಿತ್ತು. ಒಂದೇ ಬಾರಿಗೆ ಭಾರೀ ಸಂಖ್ಯೆಯ ಜನ ವೆಬ್‍ಸೈಟಿಗೆ ಭೇಟಿ ನೀಡಿದ ಕಾರಣ ಕ್ರ್ಯಾಶ್ ಆಗಿತ್ತು. ಹೆಲ್ತ್ ಕೋಡ್ ಇದ್ದವರಿಗೆ ಮಾತ್ರ ನೋಂದಣಿ ಮಾಡಲು ಸರ್ಕಾರ ಅನುಮತಿ ನೀಡಿತ್ತು.

ಈ ಸಂಬಂಧ ಇಂದು ಮದುವೆ ಪ್ರಮಾಣಪತ್ರ ಪಡೆದ ಜೋಡಿ ಪ್ರತಿಕ್ರಿಯಿಸಿ, ನಾವು ಈ ದಿನಕ್ಕಾಗಿ ಹಲವು ದಿನಗಳಿಂದ ಕಾಯುತ್ತಿದ್ದೆವು. ಆ ಸುದಿನ ಇಂದು ಬಂದಿದೆ. ಲಾಕ್‍ಡೌನ್ ತೆರವಾದ ದಿನವೇ ಪ್ರಮಾಣ ಪತ್ರ ಸಿಕ್ಕಿದ ಕಾರಣ ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ವುಹಾನ್ ವಿಶೇಷತೆ ಏನು?
ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.

Comments

Leave a Reply

Your email address will not be published. Required fields are marked *