ಪಡಿತರಕ್ಕಾಗಿ ಹಣ ವಸೂಲಿ – ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಯ್ತು ಸತ್ಯ

ಚಿಕ್ಕಬಳ್ಳಾಪುರ: ಸರ್ಕಾರ ಕೊರೊನಾ ಎಫೆಕ್ಟ್ ನಡುವೆ ಬಡವರಿಗೆ ಉಚಿತ ಅಕ್ಕಿ ಗೋಧಿ ವಿತರಣೆ ಮಾಡಲು ಹೇಳಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.

ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದ ನಿಮ್ಮ ಪಬ್ಲಿಕ್ ಟಿವಿಗೆ ನಗರದ ಎಂಜಿ ರಸ್ತೆಯ ನ್ಯಾಯಬೆಲೆ ಅಂಗಡಿ 95ರಲ್ಲಿ ವಿತರಕ ರಮೇಶ್ ಎಂಬಾತ 20 ರೂಪಾಯಿ ಪಡೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಕೇಳಿದರೆ ಹೆಚ್ಚುವರಿಯಾಗಿ ಸಕ್ಕರೆ ನೀಡುತ್ತಿದ್ದು ಅದಕ್ಕಾಗಿ 20 ರೂಪಾಯಿ ಪಡೆಯುತ್ತಿದ್ದೇನೆ ಎಂದು ರಮೇಶ್ ಹೇಳಿದ್ದಾನೆ.

ಸಕ್ಕರೆ ವಿತರಣೆ ಮಾತ್ರ ಮಾಡುತ್ತಿರಲಿಲ್ಲ. ಇನ್ನೂ 1 ಕೆಜಿ ಸಕ್ಕರೆಗೆ 37 ರೂಪಾಯಿ ಇದ್ದು 20 ರೂಪಾಯಿ ಯಾಕೆ ಪಡೆಯುತ್ತೀರಿ ಎಂದರೆ, ಸಕ್ಕರೆ ಈಗ ಕೊಡಲ್ಲ, ಅಮೇಲೆ ತಂದು ಕೊಟ್ಟು ಉಳಿದ ಹಣ ಅಮೇಲೆ ತಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಆದರೆ ಬಹುತೇಕರಿಂದ 20 ರೂಪಾಯಿ ಹಣ ಪಡೆಯಲಾಗುತ್ತಿದೆ.

ನಿಮ್ಮಾಕಲಕುಂಟೆಯ ನ್ಯಾಯಬೆಲೆ ಅಂಗಡಿಯಲ್ಲೂ ಸಹ ಜನರಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಹಣ ವಸೂಲಿ ಮಾಡುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇವರು ಕೂಡ ತಾವು ಸಹ ಸಕ್ಕರೆ, ಸೋಪು ಕೊಡುತ್ತಿದ್ದು ಅದಕ್ಕೆ ಹಣ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಥಂಬ್ ಪಡೆಯೋಕೆ 5 ರೂಪಾಯಿ ಪಡೀತಿವಿ ಎಂದು ಪಡಿತರ ಅಂಗಡಿ ಮಾಲೀಕಿ ಅಶ್ವತ್ಥಮ್ಮ ಸಬೂಬು ಹೇಳಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲೂ ಸಹ 20 ರೂಪಾಯಿ ಹಣ ವಸೂಲಿ ಪಡೆಯುತ್ತಿರುವುದನ್ನು ಯುವಕನೋರ್ವ ವಿಡಿಯೋ ಮಾಡಿ ಮಾಲೀಕನನ್ನು ಪ್ರಶ್ನೆ ಮಾಡಿದ್ದು, ಸಾಗಾಟದ ಖರ್ಚು ವೆಚ್ಚಕ್ಕಾಗಿ ಹಣ ವಸೂಲಿ ಮಾಡುತ್ತಿದ್ದೇವೆ ಎಂದು ಅಂಗಡಿ ಮಾಲೀಕ ಹೇಳಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

Comments

Leave a Reply

Your email address will not be published. Required fields are marked *