ಮಹಾರಾಷ್ಟ್ರದಲ್ಲಿ ಒಂದೇ ದಿನ 13 ಸಾವು- ಮೃತರ ಸಂಖ್ಯೆ 45ಕ್ಕೆ ಏರಿಕೆ

ಮುಂಬೈ: ಹೆಮ್ಮಾರಿ ಕೊರೋನಾದಿಂದಾಗಿ ನೆರೆಯ ರಾಜ್ಯ ಮಹಾರಾಷ್ಟ್ರ ಅಕ್ಷರಶಃ ಮುದ್ದೆ ಮುದ್ದೆಯಾಗುತ್ತಿದೆ. ಭಾನುವಾರ ಒಂದೇ ದಿನದಲ್ಲಿ 13 ಜನರ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 45ಕ್ಕೆ ಏರಿಕೆ ಕಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಇಂದು 13 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ಈವರೆಗೂ ಕೊರೊನಾಗೆ ಒಟ್ಟು 45 ಜನರ ಬಲಿಯಾಗಿದ್ದಾರೆ. ಇಂದು ಮುಂಬೈನಲ್ಲಿ 8 ಮಂದಿ, ಪುಣೆಯಲ್ಲಿ ಮೂವರು, ಕಲ್ಯಾಣ್, ಡೊಂಬಿವಾಲಿ ಹಾಗೂ ಔರಂಗಬಾದ್‍ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಭಾನುವಾರ ಒಂದೇ ದಿನದಲ್ಲಿ 113 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 478ಕ್ಕೆ ಏರಿಕೆ ಕಂಡಿದೆ. ಈ ಪೈಕಿ 56 ಜನರು ಗುಣಮುಖರಾಗಿದ್ದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆ ಕಂಡಿದೆ. ಇಂದು ಓರ್ವ ಕೊರೊನಾ ಸೋಂಕಿತ ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿದೆ ಎಂದು ಮಧ್ಯಪ್ರದೇಶದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಲ್ಲವಿ ಜೈನ್ ಗೋವಿಲ್ ತಿಳಿಸಿದ್ದಾರೆ.

ದೇಶಾದ್ಯಂತ ಡೆಡ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಈವರೆಗೆ ದೆಹಲಿಯಲ್ಲಿ 445 ಪ್ರಕರಣಗಳು ದಾಖಲಾಗಿದ್ದು ಸದ್ಯದವರೆಗೆ 6 ಮಂದಿ ಕೊರೊನಾಗೆ ಬಲಿ ಆಗಿದ್ದಾರೆ. ತಬ್ಲಿಘಿಯಲ್ಲಿ ಭಾಗಿಯಾಗಿದ್ದವರ ಪತ್ತೆಗೆ ಮೊಬೈಲ್ ನಂಬರ್ ಗಳನ್ನು ದೆಹಲಿ ಪೊಲೀಸರು ಬೆನ್ನತ್ತಿದ್ದಾರೆ. ಇದರ ಮಧ್ಯೆ ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪಲಾಯನಕ್ಕೆ ಯತ್ನಿಸ್ತಿದ್ದ 8 ಮಂದಿ ಮಲೇಷ್ಯನ್ನರನ್ನು ಬಂಧಿಸಲಾಗಿದೆ. ಇವರು ಸಹ ಜಮಾತ್ ಕಾರ್ಯಕಮ್ರದಲ್ಲಿ ಭಾಗಿಯಾಗಿದ್ದರು ಎಂದು ಶಂಕಿಸಲಾಗಿದೆ.

ರಾಜದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್, ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಗುರುತಿಸುವಂತೆ ತಿಳಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಇಂದು 34 ಹೊಸ ಪ್ರಕರಣಗಳು ಪತ್ತೆ ಆಗಿದ್ದು, ಸೋಂಕಿತರ ಸಂಖ್ಯೆ 226ಕ್ಕೇರಿದೆ. ಕರ್ನೂಲ್‍ನಲ್ಲಿ 23, ಚಿತ್ತೂರಿನಲ್ಲಿ 7, ನೆಲ್ಲೂರು, ಪ್ರಕಸಂನಲ್ಲಿ ತಲಾ 2 ಕೇಸ್‍ಗಳು ಪತ್ತೆ ಆಗಿದೆ. ಇವುಗಳಲ್ಲಿ ಬಹುತೇಕರಿಗೆ ಜಮಾತ್ ನಂಟಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *