ಬಸ್, ಅಂಬುಲೆನ್ಸ್ ಇಲ್ಲ, ಕಾಲಿನಲ್ಲಿ ಚಪ್ಪಲಿಯೂ ಇಲ್ಲ, ಕಂಕುಳಲ್ಲಿ ಮಗು

– 12 ಕಿ.ಮೀ. ನಡೆದು ಆಸ್ಪತ್ರೆ ತಲುಪಿದ ತಾಯಿ

ರಾಯ್ಪುರ: ತಾಯಿ ಪ್ರೀತಿಗಿಂತ ಬೇರಾವ ಪ್ರೀತಿ ದೊಡ್ಡದಲ್ಲ ಎಂಬ ಮಾತಿದೆ. ತಾಯಿ ತನ್ನ ಮಕ್ಕಳಿಗಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ಧಳಿರುತ್ತಾಳೆ. ಎಂತಹ ಕಷ್ಟದ ಸಂದರ್ಭದಲ್ಲಿಯೂ ತಾನು ಉಪವಾಸವಿದ್ದು ಮಕ್ಕಳಿಗೆ ಊಟ ಮಾಡಿಸುತ್ತಾಳೆ. ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೆಟ್ಟ ಮಗು ಹುಟ್ಟಬಹುದೇ ವಿನಃ ಎಂದೂ ಕೆಟ್ಟ ತಾಯಿ ಇರಲ್ಲ ಎಂದು ಹಿರಿಯರು ಹೇಳುತ್ತಾರೆ. ಲಾಕ್‍ಡೌನ್ ನಿಂದಾಗಿ ವಾಹನ ಸಂಚಾರ ಸ್ತಬ್ಧಗೊಂಡಿದ್ದರಿಂದ ತಾಯಿಯೊಬ್ಬಳು ಕಂಕುಳಲ್ಲಿ ಮಗುವನ್ನು ಹೊತ್ತುಕೊಂಡು 12 ಕಿ.ಮೀ. ನಡೆದು ಆಸ್ಪತ್ರೆ ತಲುಪಿದ್ದಾಳೆ. ಈ ಮಹಾನ್ ತಾಯಿಯ ಕಾಲಿನಲ್ಲಿ ಚಪ್ಪಲಿಯೂ ಸಹ ಇರಲಿಲ್ಲ.

ಛತ್ತೀಸಗಢ ರಾಜ್ಯದ ಸಮೇಲಿ-ಅರನಪುರ ಮಾರ್ಗದಲ್ಲಿ ಮಹಿಳೆ ತನ್ನ ಮಗುವನ್ನು ಕಂಕುಳಲ್ಲಿ ಹೊತ್ತು ಸಾಗುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಹಿಳೆ ಕಾಲಿನಲ್ಲಿ ಚಪ್ಪಲಿಯೂ ಇಲ್ಲದಿರೋದನ್ನು ನೋಡಿದ ನೆಟ್ಟಿಗರು ಮರುಗಿದ್ದಾರೆ.

ಮಾರ್ಗ ಮಧ್ಯೆ ಕೆಲವರು ಮಹಿಳೆಯನ್ನು ಮಾತನಾಡಿಸಿದಾಗ, ಮಗುವಿನ ಆರೋಗ್ಯ ಸರಿ ಇಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಗುಣಮುಖವಾಗಲಿಲ್ಲ. ಹಾಗಾಗಿ ನಗರದ ಆಸ್ಪತ್ರೆಗೆ ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಗುವಿನ ತಾಯಿ ಜೊತೆಯಲ್ಲಿದ್ದ ಮಹಿಳೆ ಮಾತನಾಡಿ, ಕಳೆದ ಕೆಲವು ದಿನಗಳಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಅರನಪುರಕ್ಕೆ ತೆರಳಲು ಯಾವುದೇ ವಾಹನಗಳು ನಮಗೆ ಸಿಗಲಿಲ್ಲ. ಸರ್ಕಾರಿ ಅಂಬುಲೆನ್ಸ್ ವ್ಯವಸ್ಥೆಯೂ ನಮಗೆ ಸಿಕ್ಕಿಲ್ಲ. ಮಗುವಿಗಾಗಿ ಪೆಢಕಾ ಗ್ರಾಮದಿಂದ ನಡೆದುಕೊಂಡು ಹೋಗಿತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಅಧಿಕಾರಿ ಅತೀಕ್ ಅನ್ಸಾರಿ, ಕಳೆದ ಕೆಲ ತಿಂಗಳಿನಿಂದ ಅಂಬುಲೆನ್ಸ್ ಗೆ ಚಾಲಕರಿಲ್ಲ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಜೊತೆ ನಾವೇ ಅಂಬುಲೆನ್ಸ್ ತೆಗೆದುಕೊಂಡು ಪರಿಸ್ಥಿತಿ ಇದೆ. ಎರಡು ವರ್ಷಗಳ ಹಿಂದೆ ನಮ್ಮ ಆಸ್ಪತ್ರೆಗೆ ಒಂದು ಅಂಬುಲೆನ್ಸ್ ನೀಡಲಾಗಿತ್ತು. ಆದ್ರೆ ಚಾಲಕರಿಗೆ ಸರಿಯಾದ ವೇತನ ನೀಡದ ಹಿನ್ನೆಲೆಯಲ್ಲಿ ಅವರು ಕೆಲಸ ತೊರೆದಿದ್ದಾರೆ. ಕೂಡಲೇ ಮೇಲಾಧಿಕಾರಿಗಳ ಜೊತೆ ಈ ಕುರಿತು ಮಾತನಾಡಿ ಚಾಲಕನನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *