ಅಮ್ಮನ ತಿಥಿಗೆ 1,500 ಜನರಿಗೆ ಊಟ ಹಾಕಿಸಿದ ಮಗ – ಮನೆಯ 12 ಮಂದಿಗೀಗ ಕೊರೊನಾ ಪಾಸಿಟಿವ್

ಭೋಪಾಲ್: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಅಟ್ಟಹಾಸ ಭಾರತದಲ್ಲಿಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ ತನ್ನ ಅಮ್ಮನ ತಿಥಿಗೆ ಬರೋಬ್ಬರಿ 1,500 ಮಂದಿಗೆ ಊಟ ಹಾಕಿಸಿದ್ದು, ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊರೇನಾ ಮೂಲದ ಸುರೇಶ್ ತನ್ನ ಅಮ್ಮ ತೀರಿಹೋದ ಮೇಲೆ ದುಬೈನಿಂದ ವಾಪಸ್ ಬಂದಿದ್ದನು. ಅಮ್ಮನ ತಿಥಿಗೆ ಸುಮಾರು 1,500 ಮಂದಿಗೆ ಆಹ್ವಾನಿಸಿ ಊಟ ಹಾಕಿಸಿದ್ದನು. ದುಬೈನಿಂದ ಬಂದ ಹಿನ್ನೆಲೆ ಆತನನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಅಲ್ಲದೇ ತಿಥಿ ಕಾರ್ಯದಲ್ಲಿ ಭಾಗಿಯಾಗಿ ಊಟ ಮಾಡಿ ಹೋಗಿದ್ದ ಇಡೀ ಕಾಲೋನಿಯನ್ನೇ ಸೀಲ್ ಮಾಡಲಾಗಿತ್ತು. ಆದರೆ ಇದೀಗ ಸುರೇಶ್ ಜೊತೆಗೆ ಆತನ ಕುಟುಂಬದ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ತಿಥಿ ಊಟ ಮಾಡಿದ್ದ 1,500 ಜನರಿಗೂ ಕೊರೊನಾ ಸೋಂಕಿನ ಭಯ ಹುಟ್ಟಿದೆ.

ದುಬೈನಿಂದ ಅಮ್ಮನ ಅಂತ್ಯಕ್ರಿಯೆಗೆಂದು ಊರಿಗೆ ಬಂದಿದ್ದ ಸುರೇಶ್ ಮಾ. 20ರಂದು ತನ್ನ ಕಾಲೋನಿ ಮತ್ತು ಸಂಬಂಧಿಕರು ಸೇರಿ ಸುಮಾರು 1,500 ಮಂದಿಗೆ ತಿಥಿಯ ಊಟ ಹಾಕಿಸಿದ್ದನು. ಮಾ. 25ರಂದು ಸುರೇಶ್‍ಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದನು. ಈ ವೇಳೆ ಕೊರೊನಾ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಆತನನ್ನು ಮತ್ತು ಆತನ ಪತ್ನಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಬಳಿಕ ಆತನ ಸಂಪರ್ಕದಲ್ಲಿದ್ದ 23 ಸಂಬಂಧಿಕರನ್ನು ವೈದ್ಯರು ತಪಾಸಣೆ ನಡೆಸಿದಾಗ ಈ ಪೈಕಿ 10 ಮಂದಿಯ ವರದಿ ಕೊರೊನಾ ಪಾಸಿಟಿವ್ ಬಂದಿದೆ.

12 ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಿಥಿಯಲ್ಲಿ ಪಾಲ್ಗೊಂಡಿದ್ದವರೆಲ್ಲರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ.

ದುಬೈನಿಂದ ಬರುವ ಮುನ್ನ ತಪಾಸಣೆಗೆ ಒಳಗಾದಾಗ ತನಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದರೆ ತಾನು ಹಾಗೂ ತನ್ನ ಪತ್ನಿ ಊರಿಗೆ ವಾಪಸ್ ಬರುವ ಎರಡು ದಿನಗಳ ಹಿಂದೆ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದಳು ಎಂದು ಸುರೇಶ್ ತಿಳಿಸಿದ್ದಾನೆ.

ಈಗಾಗಲೇ ಭಾರತದಲ್ಲಿ ಸೋಂಕಿತರ ಸಂಖ್ಯೆ 2,547ಕ್ಕೆ ಏರಿದ್ದು, 67 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ಸುಮಾರು 154 ಮಂದಿ ಕೊರೊನಾಗೆ ತುತ್ತಾಗಿದ್ದಾರೆ.

ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಭಾರತದಲ್ಲಿ ವರದಿಯಾಗಿರುವ ಕೊರೊನಾ ಸೋಂಕಿತರಲ್ಲಿ ಬಹುಪಾಲು ಮಂದಿ ಈ ಸಮಾವೇಶದಲ್ಲಿ ಭಾಗಿಯಾಗಿದ್ದವರೇ ಆಗಿದ್ದಾರೆ. 2,547 ಕೊರೊನಾ ಸೋಂಕಿತರಲ್ಲಿ 950 ಮಂದಿ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದವರು ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *