ಮೇ 21ಕ್ಕೆ ಯುವರತ್ನ ಬಿಡುಗಡೆ- ನಿರ್ದೇಶಕ ಆನಂದರಾಮ್ ಸ್ಪಷ್ಟನೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಸಿನಿಮಾ ಬಿಡುಗಡೆ ಕುರಿತು ಭಾರೀ ಕುತೂಹಲ ಮೂಡಿದ್ದು, ಅಭಿಮಾನಿಗಳು ಬಿಡುಗಡೆ ದಿನಾಂಕದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿತ್ತು. ಆದರೆ ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸ್ಪಷ್ಟನೆ ನೀಡಿದ್ದಾರೆ.

ಹಲವು ದಿನಗಳಿಂದ ಯುವರತ್ನ ಸಿನಿಮಾದ ಬಿಡುಗಡೆ ದಿನಾಂಕದ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ. ಇದರ ಮಧ್ಯೆಯೇ ಸಿನಿಮಾದ ನಿರ್ದೇಶಕ ಸಂತೋಶ್ ಆನಂದರಾಮ್ ಟ್ವೀಟ್ ಮೂಲಕ ಮಾಹಿತಿ ನೀಡಿ ಬಿಡುಗಡೆ ದಿನಾಂಕದ ಕುರಿತು ಸುಳಿವು ನೀಡಿದ್ದರು. ಆದರೆ ಈ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ ಎಂಬುದು ನಂತರ ತಿಳಿದಿದೆ. ನಂತರ ಸಂತೋಷ್ ಅವರು ಇದಕ್ಕೆ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಹೀಗಾಗಿ ಯುವರತ್ನ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಸಿನಿಮಾ ಬಿಡುಗಡೆ ಕುರಿತು ಸಂತೋಷ್ ಆನಂದರಾಮ್ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು. ಯುವರತ್ನನಿಗಾಗಿ ಕಾಯುತ್ತಿರುವ ಎಲ್ಲ ಪವರ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಸರ್‍ಪ್ರೈಸ್. ಬಹುನಿರೀಕ್ಷಿತ ಯುವರತ್ನ ಸಿನಿಮಾ ಮೇ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಪವರ್ ಸ್ಟಾರ್ ಸ್ವಾಗತಿಸಲು ಸಜ್ಜಾಗಿ ಎಂದು ಟ್ವೀಟ್ ಮಾಡಿದ್ದರು. ಇದರಿಂದಾಗಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಆದರೆ ಈ ಸುದ್ದಿ ಸುಳ್ಳು ಎಂಬುದು ನಂತರ ತಿಳಿದಿದೆ. ಸ್ವತಃ ಸಂತೋಷ್ ಆನಂದರಾಮ್ ಅವರೇ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಇದು ತಪ್ಪು ಮಾಹಿತಿ ಇನ್ನೂ 2 ಹಾಡುಗಳ ಚಿತ್ರೀಕರಣವಿದೆ. ಅಲ್ಲದೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪಕ್ಕಾ ಮುಗಿದ ಮೇಲೆ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ. ಯುವರತ್ನ ಬಿಗ್ಗೆಸ್ಟ್ ರಿಲೀಸ್ ಆಗಿದ್ದು, ಪಬ್ಲಿಸಿಟಿ, ಆಡಿಯೋ-ಟ್ರೈಲರ್ ರಿಲೀಸ್ ಎಲ್ಲದಕ್ಕೂ ಪ್ಲಾನ್ ಇದೆ. ಹೀಗಾಗಿ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಟ್ವೀಟ್ ಮಾಡಿದ್ದು, ಯುವರತ್ನ ಬಳಸಿಕೊಂಡು ಕೆಲವರು ಫೂಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಪ್ರತಿಕ್ರಿಯಿಸಿದೆ. ಯುವರತ್ನ ನಮ್ಮೆಲ್ಲರಿಗೂ ದೊಡ್ಡಮಟ್ಟದ್ದಾಗಿದೆ ಎಂದು ಮೂರನೇ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು ಹೊಂಬಾಳೆ ಫಿಲಂಸ್ ಆಗಲಿ ಅಥವಾ ಪುನೀತ್ ರಾಜ್‍ಕುಮಾರ್ ಆಗಲಿ ಮಾಹಿತಿ ಖಚಿತಪಡಿಸಿಲ್ಲ. ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಪುನೀತ್ ರಾಜ್‍ಕುಮಾರ್ ಸಹಾಯ ಹಸ್ತ ಚಾಚಿದ್ದು, ಇತ್ತೀಚೆಗಷ್ಟೇ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ.ಗಳ ಚೆಕ್ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದ್ದರು.

ಇತ್ತೀಚೆಗೆ ಪುನೀತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಚಿತ್ರ ತಂಡ ಡೈಲಾಗ್ ಟೀಸರ್‍ನ್ನು ಉಡುಗೊರೆಯಾಗಿ ನೀಡಿತ್ತು. ಯುವರತ್ನ ಚಿತ್ರತಂಡ ಡೈಲಾಗ್ ಟೀಸರ್ ಬಿಡುಗಡೆ ಮಾಡಿದರೆ, ಜೇಮ್ಸ್ ಚಿತ್ರತಂಡ ಸಹ ಮೋಷನ್ ಪೋಸ್ಟರ್ ರಿಲೀಸ್ ಮಾಡಿತ್ತು. ಯುವರತ್ನದ ಡೈಲಾಗ್ ಟೀಸರ್ ಯುವ ಸಮೂಹವನ್ನು ಸೆಳೆದಿತ್ತು. ಹೀಗಾಗಿ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಂಡಿದೆ.

Comments

Leave a Reply

Your email address will not be published. Required fields are marked *