ಕೊರೊನಾ ಎಫೆಕ್ಟ್ – ಸ್ವಗ್ರಾಮಕ್ಕೆ ಬಂದ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ

ಲಕ್ನೋ: ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಸ್ವಗ್ರಾಮಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರ ಮೇಲೆ ಅಗ್ನಿಶಾಮಕದಳ ಸಿಬ್ಬಂದಿ ರಾಸಾಯನಿಕ ಸಿಂಪಡಿಸಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

ದೆಹಲಿ, ಮುಂಬೈ ಸೇರಿದಂತೆ ಹಲವು ಮಹಾನಗರಗಳಿಂದ ಸ್ವಗ್ರಾಮಗಳಿಗೆ ತೆರಳಿದ್ದ ಕಾರ್ಮಿಕರ ಮೇಲೆ ಅಗ್ನಿ ಶಾಮಕ ದಳದ ಸಿಬ್ಬಂದಿ ರಾಸಾಯನಿಕಯುಕ್ತ ನೀರನ್ನು ಸಿಂಪಡಿಸಿದ್ದಾರೆ ಎಂದು ವರದಿಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ವಿರುದ್ಧ ನಾವೆಲ್ಲರೂ ಜೊತೆಯಾಗಿ ಹೋರಾಡುತ್ತಿದ್ದೇವೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಆದರೆ ದಯವಿಟ್ಟು ಇಂತಹ ಅಮಾನವೀಯ ಕೆಲಸಗಳನ್ನು ಮಾಡಬೇಡಿ. ವಲಸೆ ಕಾರ್ಮಿಕರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮೇಲೆ ರಾಸಾಯನಿಕ ಸಿಂಪಡಿಸುವ ಮೂಲಕ ಅವರನ್ನು ಈ ರೀತಿ ನಡೆಸಿಕೊಳ್ಳಬೇಡಿ. ಇದು ಅವರನ್ನು ರಕ್ಷಿಸುವುದಿಲ್ಲ ಬದಲಿಗೆ ಅವರ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎಂದು ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.

ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬರೇಲಿ ಪುರಸಭೆ ತಹಶಿಲ್ದಾರ್ ಪ್ರಕರಣದ ತನಿಖೆಗೆ ಆದೇಶಿಸಿದ್ದು, ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವರು, ಬಸ್‍ಗಳನ್ನು ಸ್ಯಾಜಿಟೈಜ್ ಮಾಡಲು ಹೇಳಿದ್ದೆವು ಆದರೆ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಮಿಕರ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *