ಓರ್ವನಿಂದ 9 ಮಂದಿಗೆ ಕೊರೊನಾ – ನಂಜನಗೂಡು ಸ್ತಬ್ಧ, ಮನೆಗಳಿಗೆ ಆಹಾರ ವಿತರಣೆ

– ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
– ಮನೆಯಿಂದ ಯಾರೂ ಹೊರ ಬರುವಂತಿಲ್ಲ
– 10 ಮನೆಗೆ ಓರ್ವ ಪೊಲೀಸ್ ಸಿಬ್ಬಂದಿ ನೇಮಕ

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿದ್ದು, ಒಂದೇ ದಿನದಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ನಂಜನಗೂಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎರಡನೇ ದಿನವೂ ನಾಕಾಬಂದಿ ಮುಂದುವರೆದಿದೆ.

ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಮೈಸೂರು-ಊಟಿ, ಕೇರಳ ಮತ್ತು ತಮಿಳುನಾಡು ಸಂಪರ್ಕ ಕಲ್ಪಿಸುವ ಹೆದ್ದಾರಿ ಸೇರಿದಂತೆ ಪಟ್ಟಣಕ್ಕೆ ನಾಲ್ಕು ಕಡೆಯಿಂದ ಸಂಪರ್ಕಿಸೋ ಎಲ್ಲಾ ಮುಖ್ಯ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಪಾಸ್ ಹೊಂದಿರುವ ವಾಹನಗಳಿಗೆ, ದಿನಸಿ ಪದಾರ್ಥ ತರೋ ವಾಹನ ಹೊರತುಪಡಿಸಿ ಎಲ್ಲಾ ವಾಹನಗಳ ಪ್ರವೇಶ ರದ್ದು ಮಾಡಲಾಗಿದೆ. ನಂಜನಗೂಡು ಪಟ್ಟಣದಿಂದ ಯಾರು ಹೊರಹೋಗದಂತೆ ಮತ್ತು ಒಳ ಬರದಂತೆ ಪೊಲೀಸರು ನಾಕಾಬಂಧಿ ಹಾಕಿದ್ದು, ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ.

ಈ ಬಗ್ಗೆ ಜಿಲ್ಲಾ ಉಸ್ತವಾರಿ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಮೈಸೂರಿನಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇಬ್ಬರು ವಿದೇಶದಿಂದ ಬಂದವರು ಹಾಗೂ ಉಳಿದ 10 ಮಂದಿ ಜುಬಿಲೆಂಟ್ ಕಾರ್ಖಾನೆಯ ನೌಕರರಿಗೆ ಸೋಂಕು ತಗುಲಿದೆ. ಇದು ನೋವಿನ ಸಂಗತಿ ಹೀಗೆ ಆಗಬಾರದಿತ್ತು, ಆದರೆ ಆಗೋಗಿದೆ. ಈ ಬಗ್ಗೆ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. 6 ಮಂದಿ ಕೋವಿಡ್-19ಗಾಗಿ ಪ್ರತ್ಯೇಕವಾಗಿ ಮಾಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅವರು ಕೂಡ ಇಂದು ಕೋವಿಡ್-19ಗಾಗಿ ಇರುವ ಆಸ್ಪತ್ರೆಗೆ ಶಿಫ್ಟ್ ಆಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಹೋಂ ಕ್ವಾರಂನ್‍ಟೈನ್‍ನಲ್ಲಿ ಇರಬೇಕು ಎಂದು ಗುರುತಿಸಿದ ಮಂದಿ ಮನೆಯಿಂದ ಹೊರಹೋಗುತ್ತಿದ್ದಾರೆ. ಹೀಗಾಗಿ ಅವರು ಮನೆಬಿಟ್ಟು ಹೊರಹೋಗದಂತೆ ನೋಡಿಕೊಳ್ಳಲು 10 ಮನೆಗಳಿಗೆ ಒಬ್ಬ ಪೊಲೀಸ್ ಸಿಬ್ಬಂದಿ, ಆರೋಗ್ಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ನೇಮಿಸಲಾಗುತ್ತೆ. ಅವರು 10 ಮನೆಯಲ್ಲಿ ಕ್ವಾರಂಟೈನ್‍ನಲ್ಲಿರುವ ಮನೆ ಮಂದಿ ಮೇಲೆ ನಿಗವಹಿಸಲಿದ್ದಾರೆ. ಅಧಿಕಾರಿಗಳಿಗೆ ವಹಿಸಿರುವ ಮನೆಗಳಿಗೆ ಆಹಾರ ತಂದು ಕೊಡುವುದು, ಔಷಧಿಗಳನ್ನು ತಂದುಕೊಡುವುದು ಹಾಗೂ ಅಗತ್ಯ ವಸ್ತುಗಳನ್ನು ತಂದುಕೊಡುವ ವ್ಯವಸ್ಥೆಯನ್ನು ಅವರೇ ನೋಡಿಕೊಳ್ಳುತ್ತಾರೆ. ಇಂದು ಸಂಜೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದರು.

ಮನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ತಹಶೀಲ್ದಾರ್‍ಗಳ ಜೊತೆಗೂ ಚರ್ಚೆ ನಡೆಸಿದ್ದೇನೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಾಗೆಯೇ ಹೋಂ ಕ್ವಾರಂಟೈನ್ ಆಗುವ ಮಂದಿಗೆ ಹಾಕುತ್ತಿಒರುವ ಸ್ಟಾಂಪ್ ಅಳಸಿ ಹೋಗುತ್ತಿದೆ ಎನ್ನುವುದು ತಿಳಿದು ಬಂದಿದೆ. ಆದ್ದರಿಂದ ಇನ್ನು ಮುಂದೆ ಚುನಾವಣೆ ಸಮಯದಲ್ಲಿ ಮತದಾರರು ವೋಟ್ ಹಾಕುವಾಗ ಅವರ ಬೆರಳಿಗೆ ಹಾಕುವ ಇಂಕ್‍ಯನ್ನು ಹೋಂ ಕ್ವಾರಂಟೈನ್ ಸ್ಟಾಂಪ್ ಜೊತೆಗೆ ಶಂಕಿತರ ಬೆರಳಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಸಚಿವರು ತಿಳಿಸಿದರು.

Comments

Leave a Reply

Your email address will not be published. Required fields are marked *