ಊರು ಸೇರಲು ಊಟವಿಲ್ಲದೇ 135 ಕಿ.ಮೀ ನಡೆದ ಕೂಲಿ ಕಾರ್ಮಿಕ

– ಕಾರ್ಮಿಕನಿಗಾಗಿ ಮನೆಯಿಂದ ಊಟ ತರಿಸಿಕೊಟ್ಟ ಪೊಲೀಸ್

ಮುಂಬೈ: ಕೊರೊನಾ ವೈರಸ್ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಕೂಲಿ ಕಾರ್ಮಿಕನೋರ್ವ ಊಟವಿಲ್ಲದೇ 135 ಕೀ.ಮೀ ನಡೆದು ತನ್ನ ಊರು ಸೇರಿದ್ದಾನೆ.

ಕೊರೊನಾ ವೈರಸ್ ಭೀತಿಯಿಂದ ಊರು ಬಿಟ್ಟು ಬೇರೆ ಕಡೆ ಕೂಲಿ ಮಾಡುತ್ತಿದ್ದವರೆಲ್ಲ, ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಿದ್ದಾರೆ. ಪ್ರಧಾನಿ ಅವರ ಆದೇಶದ ಮೇರೆಗೆ ಪೂರ್ತಿ ಇಂಡಿಯಾ ಲಾಕ್‍ಡೌನ್ ಆಗಿದೆ. ಆದರೂ ಕೆಲವರು ನಡೆದುಕೊಂಡು ಸಿಕ್ಕ ಸಿಕ್ಕ ವಾಹನ ಏರಿ ತಮ್ಮ ಊರಿಗೆ ಬರುತ್ತಿದ್ದಾರೆ. ಹಾಗೇಯೆ 26 ವರ್ಷದ ದಿನಗೂಲಿ ಕೆಸಲಗಾರ ನರೇಂದ್ರ ಶೆಲ್ಕೆ ಮಹಾರಾಷ್ಟ್ರದ ನಾಗ್ಪುರದಿಂದ ಆಹಾರವಿಲ್ಲದೆ 135 ಕಿ.ಮೀ.ಗೆ ನಡೆದು ಚಂದ್ರಪುರದ ತನ್ನ ಮನೆ ಸೇರಿದ್ದಾನೆ.

ಕೊರೊನಾ ವೈರಸ್ ನಿಂದ ಎಲ್ಲರೂ ಸಿಟಿ ಬಿಟ್ಟು ತಮ್ಮ ಹಳ್ಳಿ ಸೇರುತ್ತಿದ್ದಾರೆ. ಆದ್ದರಿಂದ ಪುಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನರೇಂದ್ರ ಶೆಲ್ಕೆ ಕೂಡ ಚಂದ್ರಪುರ ಜಿಲ್ಲೆಯ ಸಾಲಿ ತಹಸಿಲ್‍ನಲ್ಲಿರುವ ತಮ್ಮ ಜಂಭ ಗ್ರಾಮಕ್ಕೆ ಹಿಂತಿರುಗಲು ನಿರ್ಧರಿಸಿದ್ದ. ಆದರೆ ಅಷ್ಟೊತ್ತಿಗೆ ದೇಶ ಲಾಕ್‍ಡೌನ್ ಆದ ಕಾರಣ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾನೆ.

ಎಷ್ಟೇ ಕಾದರು ಊರಿಗೆ ಹೋಗಲು ಯಾವುದೇ ವಾಹನ ಸಿಗದ ಕಾರಣ ನಡೆದುಕೊಂಡು ಊರಿಗೆ ಹೋಗಲು ನಿರ್ಧರಮಾಡಿದ್ದಾನೆ. ಹಾಗಾಗಿ ಮಂಗಳವಾರ ನಾಗ್ಪುರ-ನಾಗ್‍ಬಿದ್ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾನೆ. ಲಾಕ್‍ಡೌನ್ ಆದ ಕಾರಣ ಮಧ್ಯದಲ್ಲಿ ಯಾವುದೇ ಹೋಟೆಲ್ ಅಥವಾ ಊಟ ಸಿಗದ ಕಾರಣ ಕೇವಲ ನೀರನ್ನು ಕುಡಿದುಕೊಂಡು ಎರಡು ದಿನಗಳ ಕಾಲ ನಡೆದುಕೊಂಡು ಬಂದಿದ್ದಾನೆ.

ಈ ವೇಳೆ ಬುಧವಾರ ರಾತ್ರಿ ನಾಗ್ಪುರದಿಂದ 135 ಕಿ.ಮೀ ದೂರದಲ್ಲಿರುವ ಸಿಂಡೆವಾಹಿ ತಹಸಿಲ್ನ ಶಿವಾಜಿ ಚೌಕದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಫ್ರ್ಯೂ ವೇಳೆಯಲ್ಲಿ ಯಾಕೆ ಹೊರಗೆ ಬಂದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ಶೆಲ್ಕೆ ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಊಟವಿಲ್ಲದೇ ಎರಡು ದಿನಗಳಿಂದ ಊರಿಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.

ಶೆಲ್ಕೆ ಕಥೆ ಕೇಳಿ ಮರುಗಿದ ಪೊಲೀಸರು, ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಅಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ನಂತರ ಊಟವಿಲ್ಲದೇ ಬಳಲುತ್ತಿದ್ದ ಆತನಿಗೆ ಸಿಂಡೆವಾಹಿ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ತಮ್ಮ ಮನೆಯಿಂದ ಊಟ ತರಿಸಿ ತಿನ್ನಲು ನೀಡಿದ್ದಾರೆ. ಬಳಿಕ ಆತನ ಊರಿಗೆ ಹೋಗಲು ವಾಹನವನ್ನು ವ್ಯವಸ್ಥೆ ಮಾಡಿ 14 ದಿನ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ತಿಳಿಸಿ ಕಳುಹಿಸಿಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *