ಸಿನಿಮಾ ಕೆಲಸಗಾರರಿಗಾಗಿ 50 ಲಕ್ಷ ರೂ. ದಾನ ನೀಡಿದ ರಜನಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಕಷ್ಟದಲ್ಲಿರುವವರಿಗೆ ಹಾಗೂ ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಸಹಾಯ ಹಸ್ತ ಚಾಚುವಲ್ಲಿ ಎತ್ತಿದ ಕೈ. ಯಾವುದೇ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿಯೂ ಅವರು ಲಕ್ಷ ಲಕ್ಷ ರೂಗಳನ್ನು ಸಹಾಯದ ರೂಪದಲ್ಲಿ ನೀಡುತ್ತಾರೆ. ಅದೇ ರೀತಿ ಇದೀಗ ಕೊರೊನಾದಿಂದ ತತ್ತರಿಸಿರುವ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರಿಗೂ ಸಹಾಯ ಹಸ್ತ ಚಾಚಿದ್ದಾರೆ.

ಮಹಾಮಾರಿ ಕೊರೊನಾ ವೈರಸ್‍ನಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ. ಎಲ್ಲವೂ ಸ್ತಬ್ಧವಾಗಿದೆ, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ಕಾರ್ಖಾನೆ, ಕಂಪನಿಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಪದ್ಧತಿ ಅನುಸರಿಸಿದರೆ, ಇನ್ನೂ ಕೆಲ ಕಂಪನಿಗಳು ತಾತ್ಕಾಲಿಕವಾಗಿ ಕಾರ್ಯವನ್ನು ಸ್ಥಗಿತಗೊಳಿಸಿವೆ. ಮಾರ್ಚ್ 31ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಎಲ್ಲರೂ ಆತಂಕದಲ್ಲಿದ್ದಾರೆ.

ಕೊರೊನಾ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದ್ದು, ಸಿನಿಮಾ ಕ್ಷೇತ್ರದ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ನಟ, ನಟಿಯರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸಿನಿಮಾ ಕ್ಷೇತ್ರ ಸ್ತಬ್ಧವಾಗಿದೆ. ಇದರ ಎಫೆಕ್ಟ್ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರ ಮೇಲೆ ಬಿದ್ದಿದ್ದು, ಕೆಲಸವಿಲ್ಲದೆ, ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ತುತ್ತು ಅನ್ನಕ್ಕೂ ಬೇಡುವ ಪರಿಸ್ಥಿತಿ ಎದುರಾಗಿದೆ ಹೀಗಾಗಿ ಇಂತಹ ಕೆಲಸಗಾರರಿಗೆ ಇದೀಗ ಸಿನಿಮಾ ನಟರು ಸಹಾಯ ಹಸ್ತ ಚಾಚಿದ್ದಾರೆ.

ನಟರಾದ ಸೂರ್ಯ ಮತ್ತು ವಿಜಯ್ ಸೇತುಪತಿ ಈಗಾಗಲೇ ತಲಾ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇದಾದ ಬಳಿಕ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕಾರ್ಮಿಕರ ಕಷ್ಟಕ್ಕೆ ಮಿಡಿದಿದ್ದಾರೆ. ಚಲನಚಿತ್ರ ಕಾರ್ಮಿಕರಿಗೆಂದೇ ಇರುವ ಫಿಲ್ಮ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಸೌತ್ ಇಂಡಿಯಾ (ಎಫ್‍ಇಎಫ್‍ಎಸ್‍ಐ) ಸಂಘಟನೆಗೆ ರಜನಿಕಾಂತ್ 50 ಲಕ್ಷ ರೂ. ನೀಡಿದ್ದಾರೆ. ಈ ಸಂಘಟನೆಯಲ್ಲಿ ಸುಮಾರು 25 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೊರೊನಾ ಎಫೆಕ್ಟ್‍ನಿಂದಾಗಿ ಕೆಲಸವಿಲ್ಲದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನು ಕಂಡ ರಜನಿ, ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಜನಿಕಾಂತ್ ಸದ್ಯ ಅಣ್ಣಾತೆ ಚಿತ್ರದಲ್ಲಿ ನಟಿಸುತ್ತಿದ್ದು, ಕೊರೊನಾ ಭೀತಿಯಿಂದಾಗಿ ಸಿನಿಮಾದ ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ. ಈ ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ದು, ನಯನತಾರಾ, ಕೀರ್ತಿ ಸುರೇಶ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *