ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು

– ಮಾನವೀಯತೆ ಮೆರೆದ ಭಜರಂಗ್ ಪೂನಿಯಾ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಇದುವರೆಗೆ ಭಾರತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಬಗ್ಗೆ ಕ್ರೀಡಾಪಟುಗಳು, ನಟ-ನಟಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಭಾರತ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ.

ಭಜರಂಗ್ ಪೂನಿಯಾ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ತಮ್ಮ 6 ತಿಂಗಳ ವೇತನನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. “ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರು ಸ್ಥಾಪಿಸಿದ ಕೋವಿಡ್ -19 ರೋಗಿಗಳ ಪರಿಹಾರ ನಿಧಿಗೆ ನನ್ನ ಆರು ತಿಂಗಳ ವೇತನವನ್ನು ನೀಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಭಜರಂಗ್ ರೈಲ್ವೆ ಇಲಾಖೆಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ “ಹರಿಯಾಣ ಕೊರೊನಾ ಪರಿಹಾರ ನಿಧಿಗೆ” ಕೊಡುಗೆ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

2019ರ ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಭಜರಂಗ್ ಪೂನಿಯಾ ಅವರ ಪ್ರಯತ್ನ ಶ್ಲಾಘನೀಯ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾರ್ವಜನಿಕ ಸೇವೆಗಳನ್ನು ಒದಗಿಸಲು ಹರಿಯಾಣ ಸರ್ಕಾರ ಸೋಮವಾರ ಸ್ವಯಂಪ್ರೇರಿತ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಕೋವಿಡ್-19 ಅನ್ನು ನಿರ್ಮಾಣ ಮಾಡಲು ”ಕೋವಿಡ್ – ಸಂಘರ್ಷ ಸೇನಾನಿ” ಎಂಬ ಕಾರ್ಯಕ್ರಮವನ್ನು ಸೋಮವಾರ ಪ್ರಾರಂಭಿಸಲಾಗಿದೆ.

ಭಾರತದ ಮಾಜಿ ಆರಂಭಿಕ ಮತ್ತು ಬಿಜೆಪಿ ಶಾಸಕ ಗೌತಮ್ ಗಂಭೀರ್ ಅವರು ಕೂಡ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಅವರ ತಮ್ಮ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ(ಎಂಪಿಎಲ್‍ಎಡಿಎಸ್) ನಿಧಿಯಿಂದ 50 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಅಗತ್ಯ ಸಲಕರಣೆಗಳಿಗಾಗಿ ದೆಹಲಿ ಸರ್ಕಾರಿ ಆಸ್ಪತ್ರೆಗಳಿಗೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *