ಮೇಣದ ಬತ್ತಿಯಿಂದ ಹಾಸಿಗೆಗೆ ಬೆಂಕಿ- ತಾಯಿ ಸಹಿತ ಹಸುಗೂಸು ಸಾವು

ಚಿತ್ರದುರ್ಗ: ಮನೆಯೊಳಗಡೆ ಕತ್ತಲು ಅಂತ ಬೆಳಕಿಗಾಗಿ ಹಚ್ಚಿಟ್ಟಿದ್ದ ಮೇಣದ ಬತ್ತಿಯು ಹಾಸಿಗೆ ಮೇಲೆ ಬಿದ್ದು ಬೆಂಕಿ ಹೊತ್ತಿ ಉರಿದು 11 ದಿನದ ಮಗು ಸಹಿತ ಬಾಣಂತಿ ಸಾವನ್ನಪ್ಪಿದ್ದಾರೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊಡ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗೌರಮ್ಮ(20) ಹಾಗೂ 15 ದಿನದ ಗಂಡು ಮಗು ಬೆಂಕಿಗೆ ಆಹುತಿಯಾದ ದುರ್ದೈವಿಗಳು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತೊಡ್ಲಾರಹಟ್ಟಿ ಗ್ರಾಮದಲ್ಲಿ ಗೌರಮ್ಮ ಕಳೆದ ಮೂರು ವರ್ಷಗಳ ಹಿಂದೆ ಇದೇ ಗ್ರಾಮದ ಸೋದರ ಮಾವನ ಮಗನಾದ ಲೋಕೇಶ್ ಎಂಬವರ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ 11 ದಿನಗಳ ಹಿಂದೆ ಗಂಡು ಮಗು ಜನನವಾಗಿತ್ತು.

ಗುರುವಾರ ಸಂಜೆ ಮನೆಯಲ್ಲಿ ಕರೆಂಟ್ ಹೋದ ಕಾರಣ ಮೇಣದ ಬತ್ತಿ ಹಚ್ಚಿದ್ದಾರೆ. ಮಗು ಹಾಗೂ ತಾಯಿ ಮಲಗಿದ್ದ ಹಾಸಿಗೆ ಮೇಲ್ಭಾಗದಲ್ಲೇ ಮೇಣದ ಬತ್ತಿ ಹಚ್ಚಿದ್ದರಿಂದ ಆಕಸ್ಮಿಕವಾಗಿ ಮೇಣದಬತ್ತಿ ಹಾಸಿಗೆ ಮೇಲೆ ಬಿದ್ದಿದೆ. ಆ ಸಮಯದಲ್ಲಿ ತಾಯಿ ಮತ್ತು ಮಗು ಗಾಢ ನಿದ್ರೆಯಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಮೇಣದ ಬತ್ತಿಯಲ್ಲಿದ್ದ ಬೆಂಕಿ ಹಾಸಿಗೆಯ ಪೂರ್ಣಭಾಗಕ್ಕೆ ಹೊತ್ತಿಕೊಂಡಿದೆ. ಹೀಗಾಗಿ ಬೆಂಕಿ ನೊಡುವಷ್ಟರಲ್ಲಿ ತಾಯಿ ಹಾಗೂ ಮಗುವಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಸುಗೂಸು ಸ್ಥಳದಲ್ಲೇ ಸಾವನ್ನಪ್ಪಿದೆ.

ಈ ವಿಚಾರ ತಿಳಿದ ಕೂಡಲೇ ಗೌರಮ್ಮಳ ತಾಯಿ ಹಾಗೂ ಗಂಡ ಲೋಕೇಶ್ ಸ್ಥಳಕ್ಕೆ ಧಾವಿಸಿ, ಬೆಂಕಿಯಲ್ಲಿ ಬೆಂದಿದ್ದ ಗೌರಮ್ಮನನ್ನು ತಕ್ಷಣ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗೌರಮ್ಮ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ವೆಂಕಟೇಶಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments

Leave a Reply

Your email address will not be published. Required fields are marked *