ರಸ್ತೆಯಲ್ಲಿ ಸೀನಿದ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಜನರು

ಕೊಲ್ಲಾಪುರ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿನಿಂದ ಆತಂಕಕ್ಕೆ ಜನರು ಒಳಗಾಗಿದ್ದು, ಮಹಾರಾಷ್ಟ್ರದಲ್ಲಿ ಕರ್ಚೀಫ್ ಇಲ್ಲದೇ ಸೀನಿದವನಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಹೊಡೆದಿದ್ದಾರೆ.

ಕೊರೊನಾ ಭೀತಿಯಿಂದ ಯಾರಾದರೂ ನೆಗಡಿ ಬಂದು ಸೀನಿದರೆ, ಕೆಮ್ಮಿದರೆ ಸಾಕು ಅವರನ್ನು ಅಪರಾಧಿ ಎನ್ನುವ ರೀತಿ ಜನರು ನೋಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಮಹಾರಾಷ್ಟ್ರದಲ್ಲಿ ಒಂದು ಘಟನೆ ನಡೆದಿದೆ. ರಸ್ತೆಯಲ್ಲಿ ಕರ್ಚೀಫ್ ಇಲ್ಲದೇ ಸೀನಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ ಸೀನಿದ್ದಾನೆ. ಆದರೆ ಸೀನುವಾಗ ಆತ ಮುಖಕ್ಕೆ ಅಡ್ಡಲಾಗಿ ಕರ್ಚೀಫ್ ಇಟ್ಟುಕೊಂಡಿರಲಿಲ್ಲ. ಹೀಗಾಗಿ ವ್ಯಕ್ತಿ ಸೀನುತ್ತಿದ್ದದನ್ನು ನೋಡಿದ ಸ್ಥಳೀಯರು ಆತನ ಬೈಕನ್ನು ಅಡ್ಡಗಟ್ಟಿದ್ದಾರೆ.

‘ಕೊರೊನಾ ಎಲ್ಲೆಡೆ ಹರಡುತ್ತಿದೆ. ಸೀನುವಾಗ ಮುಖಕ್ಕೆ ಅಡ್ಡಲಾಗಿ ಏನಾದರೂ ಇಟ್ಟುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ವಾ? ನಿಮ್ಮಂಥವರಿಂದಲೇ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ,’ ಎಂದು ಜನರು ಸೀನಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ವ್ಯಕ್ತಿ ಹಾಗೂ ಜನರ ನಡುವೆ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಜನರು ಸೀನಿದವನಿಗೆ ಮನಬಂದಂತೆ ಥಳಿಸಿದ್ದಾರೆ.

ರಸ್ತೆ ಮಧ್ಯೆ ಈ ಘಟನೆ ನಡೆದ ಪರಿಣಾಮ ಕೆಲ ಕಾಲ ಟ್ರಾಫಿಕ್ ಜ್ಯಾಮ್ ಕೂಡ ಉಂಟಾಗಿತ್ತು. ಬಳಿಕ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯ್ತು.

ಮೊದಲೇ ಮಹಾರಾಷ್ಟ್ರದಲ್ಲಿ ಡೆಡ್ಲಿ ಕೊರೊನಾ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ಜನರು ಭಯಗೊಂಡಿದ್ದಾರೆ. ಸದ್ಯ 48 ಮಂದಿಗೆ ಕೊರೊನಾ ಸೋಂಕು ತಟ್ಟಿರುವುದು ದೃಢಪಟ್ಟಿದ್ದು, ಅಲ್ಲಿನ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕೂಡ ಮೂಡಿಸಲಾಗುತ್ತಿದೆ.

Comments

Leave a Reply

Your email address will not be published. Required fields are marked *