ಮದ್ಯ ತಯಾರಿಕೆ ಬಿಟ್ಟು ಸ್ಯಾನಿಟೈಜರ್ ಉತ್ಪಾದನೆಗೆ ಒತ್ತುಕೊಟ್ಟ ಶೇನ್ ವಾರ್ನ್

ಸಿಡ್ನಿ: ಕೊರೊನಾ ವೈರಸ್‍ನಿಂದಾಗಿ ಒಂದರ ನಂತರ ಒಂದರಂತೆ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗುತ್ತಿದೆ. ಮತ್ತೊಂದೆಡೆ ಭಾರತ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರಂತಹ ಅನುಭವಿಗಳು ಸಹ ವೈರಸ್ ವಿರುದ್ಧ ಹೋರಾಡಲು ಮುಂದೆ ಬಂದಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅಂತರರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ.

ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರು, ತಮ್ಮ ಕಂಪನಿಯು ಆಲ್ಕೋಹಾಲ್ ಬದಲಿಗೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ತಯಾರಿಸಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶೇನ್ ವಾರ್ನ್, ‘ಇದು ಆಸ್ಟ್ರೇಲಿಯಾಕ್ಕೆ ಸವಾಲಿನ ಸಮಯ. ಈ ಸಾಂಕ್ರಾಮಿಕ ರೋಗದಿಂದ ಜೀವಗಳನ್ನು ಉಳಿಸಲು ನಾವು ಆರೋಗ್ಯ ವ್ಯವಸ್ಥೆಗೆ ಹೇಗೆ ಸಹಾಯ ಮಾಡಬಹುದೆಂದು ನೋಡಬೇಕು. ಇಂತಹ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವುದು ನನಗೆ ಖುಷಿಯಾಗಿದೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ಅವರು 145 ಟೆಸ್ಟ್ ಹಾಗೂ 194 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು. ಟೆಸ್ಟ್ ಕ್ರಿಕೆಟ್‍ನಲ್ಲಿ 708 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಅವರು ತಮ್ಮ ಕಂಪನಿಗೆ ಟೆಸ್ಟ್ ನಲ್ಲಿ ವಿಕೆಟ್ ಪಡೆದ ಸಂಖ್ಯೆಯ ಹೆಸರನ್ನು ಇಟ್ಟಿದ್ದಾರೆ.

708 ಟೆಸ್ಟ್ ವಿಕೆಟ್ ಪಡೆದಿರುವ ಶೇನ್ ವಾರ್ನ್ ಸೆವೆನ್‍ಝೀರೋಎಟ್ ಪರವಾಗಿ ಪಶ್ಚಿಮ ಆಸ್ಟ್ರೇಲಿಯಾದ ಎರಡು ಆಸ್ಪತ್ರೆಗಳಿಗೆ ಹ್ಯಾಂಡ್ ಸ್ಯಾನಿಟೈಜರ್ ವಿತರಿಸಲಿದ್ದಾರೆ. ಕಂಪನಿಯು ಮಾರ್ಚ್ 17ರಿಂದ 70 ಪ್ರತಿಶತ ಆಲ್ಕೋಹಾಲ್ ಹೊಂದಿರುವ ಸ್ಯಾನಿಟೈಜರ್ ತಯಾರಿಸಲು ಪ್ರಾರಂಭಿಸಿದೆ.

ಶುಕ್ರವಾರ 12 ಗಂಟೆ ವೇಳೆಗೆ ಆಸ್ಟ್ರೇಲಿಯಾದ ಒಟ್ಟು 814 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 46 ಜನರು ಚೇತರಿಸಿಕೊಂಡಿದ್ದಾರೆ. ಆದರೆ 7 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ವಿಶ್ವಾದ್ಯಂತ 10 ಸಾವಿರದ ಗಡಿ ದಾಟಿದೆ.

Comments

Leave a Reply

Your email address will not be published. Required fields are marked *