ಇತಿಹಾಸದಲ್ಲೇ ಮೊದಲು – ತಿರುಪತಿ ದೇವಾಲಯ ಸಂಪೂರ್ಣ ಬಂದ್

ಚಿಕ್ಕಬಳ್ಳಾಪುರ/ಹೈದರಾಬಾದ್: ಏಳು ಬೆಟ್ಟಗಳ ಒಡೆಯ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಗೂ ಕೊರೊನಾ ಎಫೆಕ್ಟ್ ತಟ್ಟಿದ್ದು, ದೇವಾಲಯ ಬಂದ್ ಆಗಿದೆ.

ಇಂದಿನಿಂದ ತಿರುಮಲ ತಿರುಪತಿ ದೇವಸ್ಥಾನ ಬಂದ್ ಮಾಡಲಾಗಿದೆ. ಅಂದಹಾಗೆ ಮಹಾರಾಷ್ಟ್ರ ಮೂಲದ ವೃದ್ಧರೊಬ್ಬರು ದೇವಾಲಯಕ್ಕೆ ಆಗಮಿಸಿದಾಗ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಶಂಕಿತ ಕೊರೊನಾ ಸೋಂಕಿತ ಲಕ್ಷಣಗಳು ಕಂಡುಬಂದಿವೆ. ಇದರಿಂದ ಎಚ್ಚೆತ್ತ ಟಿಟಿಡಿ ಆಡಳಿತ ಮಂಡಳಿ ದೇವಾಲಯ ಬಂದ್ ಮಾಡಿದೆ.

ಈಗಾಗಲೇ ತಿರುಪತಿ ಪ್ರವೇಶದ್ವಾರ ಸಂಪೂರ್ಣ ಬಂದ್ ಮಾಡಿ ತಿರುಮಲ ಬೆಟ್ಟಕ್ಕೆ ತೆರಳುವ ಎಲ್ಲಾ ವಾಹನಗಳಿಗೆ ಭಕ್ತರಿಗೆ ಬ್ರೇಕ್ ಹಾಕಲಾಗಿದೆ. ಜೊತೆಗೆ ಕಾಲ್ನಡಿಗೆ ಮಾರ್ಗಗಳನ್ನ ಬಂದ್ ಮಾಡಲಾಗಿದೆ. ಈಗಾಗಲೇ ದೇವಾಲಯದಲ್ಲಿ ಇರುವ ಎಲ್ಲರನ್ನ ಕೆಳಗೆ ಕಳುಹಿಸಲಾಗಿದೆ.

ಕನಿಷ್ಠ ದೇವಾಲಯದ ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿಯನ್ನೂ ಸಹ ಮೇಲೆ ಬಿಡಲಾಗುತ್ತಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯದ ಬಾಗಿಲು ಬಂದ್ ಆಗಿದೆ. ದೇವರ ದರ್ಶನಕ್ಕೆ ತೆರಳಿದ್ದವರು ವಾಪಸ್ ಆಗುವಂತಾಗಿದೆ. ವೃದ್ಧನ ಜೊತೆ ಬಂದವರು ಹಾಗೂ 60 ವರ್ಷ ಮೇಲ್ಪಟ್ಟ ಹಲವರನ್ನ ಕ್ವಾರಂಟೈನ್‍ಗೆ ಗುರಿಪಡಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

Comments

Leave a Reply

Your email address will not be published. Required fields are marked *