ವಿದೇಶದಿಂದ ವಾಪಸ್ಸಾದವರ ಪ್ರತ್ಯೇಕಿಕರಣದ ಗುರುತಾಗಿ ಕೈ ಮೇಲೆ ಸ್ಟ್ಯಾಂಪಿಂಗ್

– ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ.

ವಿದೇಶದಿಂದ ಭಾರತಕ್ಕೆ ಬಂದ ಪ್ರಜೆಗಳಿಂದ ಕೊರೊನಾ ಸೋಂಕು ದೇಶದಲ್ಲಿ ಹರಡಿದೆ. ರಾಜ್ಯದಲ್ಲೂ ಹೀಗೆ ವಿದೇಶಕ್ಕೆ ಭೇಟಿ ಕೊಟ್ಟು ವಾಪಸ್ಸಾಗಿರುವ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ವಿದೇಶದಿಂದ ರಾಜ್ಯಕ್ಕೆ ಹಿಂದಿರುಗುತ್ತಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಲು ಸಿಬ್ಬಂದಿಗೆ ಸರ್ಕಾರ ಸೂಚಿಸಿದೆ. ಆದ್ದರಿಂದ ವಿಮಾನ ನಿಲ್ದಾಣದ ಸಿಬ್ಬಂದಿ ವಿದೇಶದಿಂದ ಬಂದ ಪ್ರಯಾಣಿಕರ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಿ ಗುರುತಿಸುತ್ತಿದ್ದಾರೆ.

ಕಳೆದ ರಾತ್ರಿಯಿಂದ ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ಮತ್ತೊಂದೆಡೆ ದೇವನಹಳ್ಳಿಯ ಆಕಾಶ್ ಆಸ್ವತ್ರೆಯಲ್ಲಿ ಎಂದಿನಂತೆ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು ಅಲ್ಲೂ ಸಹ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ದುಬೈ ಸೇರಿದಂತೆ ಹಲವು ದೇಶಗಳಿಂದ ಬಂದಿದ್ದ 230 ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಈ ವೇಳೆ ಒರ್ವನಿಗೆ ಎ ಗ್ರೇಡ್, ಮೂವರಿಗೆ ಬಿ ಗ್ರೇಡ್ ಮತ್ತು 226 ಜನರಿಗೆ ಸಿ ಗ್ರೇಡ್ ಬಂದಿದೆ. ಹೀಗಾಗಿ ಸಿ ಗ್ರೇಡ್ ಬಂದವರಿಗೆ ಸ್ಟ್ಯಾಂಪಿಂಗ್ ಮಾಡಿ ಹೋಂ ಕ್ವಾರಂಟೈನ್‍ಗೆ ಕಳಿಸಲಾಗಿದೆ. ಸ್ಟ್ಯಾಂಪಿಂಗ್‍ನಲ್ಲಿ ದಿನಾಂಕ ಸಮೇತ ಪ್ರಯಾಣಿಕರ ಎಡಗೈಗೆ ಹೊಂ ಕ್ವಾರಂಟೈನ್ ಅಂತ ಗುರುತು ಹಾಕಲಾಗುತ್ತಿದೆ.

https://twitter.com/sriramulubjp/status/1240500845092823040

ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗೃತ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ ಎಂದು ಬರೆದು #IndiaFightsCorona ಅಂತ ಹ್ಯಾಷ್‍ಟ್ಯಾಗ್ ಜೊತೆ ಟ್ವೀಟ್ ಮಾಡಿದ್ದಾರೆ.

ಇಂದು ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.

ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ.

ಬುಧವಾರ ಒಟ್ಟು 37 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 25, ಉತ್ತರ ಕನ್ನಡ ಮತ್ತು ಕಲಬುರಗಿಯಲ್ಲಿ 3, ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ 2, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬೊಬ್ಬರು ದಾಖಲಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 80 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *