ಫ್ಯಾಕ್ಟ್ ಚೆಕ್: ಒಂದು ಫೇಕ್ ಮೆಸೇಜಿಗೆ ಭಯಗೊಂಡ ಬೆಂಗಳೂರಿಗರು

ಬೆಂಗಳೂರು: ಕೊರೊನಾ ವೈರಸ್ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್‍ನಲ್ಲಿ ಮೆಸೇಜ್‍ವೊಂದು ಹರಿದಾಡುತ್ತಿದ್ದು, ಬೆಂಗಳೂರು ಜನರಲ್ಲಿ ಢವ ಢವ ಶುರುವಾಗಿತ್ತು. ಆದರೆ ಇದು ಸಲಿಗೆ ಸುಳ್ಳು ಸುದ್ದಿ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ ಇಂದು ರಾತ್ರಿ 10ರಿಂದ ನಾಳೆ ಬೆಳಗ್ಗೆ 5 ಗಂಟೆವರೆಗೆ ರಾಸಾಯನಿಕ ಸಿಂಪಡನೆ ಮಾಡಲಾಗುತ್ತಿದೆ. ಮನೆಯಿಂದ ಯಾರೂ ಹೊರಬರಬೇಡಿ. ಇದು ಬೆಂಗಳೂರಿನಲ್ಲಿ ಮಾತ್ರ. ಎಲ್ಲರಿಗೂ ಶೇರ್ ಮಾಡಿ ಎಂಬ ಮೆಸೇಜ್ ಅನ್ನು ಕಿಡಿಗೇಡಿಗಳು ವಾಟ್ಸಪ್‍ನಲ್ಲಿ ಹರಿಬಿಟ್ಟಿದ್ದಾರೆ.

ಸುಳ್ಳು ಸಂದೇಶದಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆಯು, ಜನರು ಆತಂಕಕ್ಕೆ ಒಳಗಾಗಬೇಡಿ. ನಗರದಲ್ಲಿ ಯಾವುದೇ ರೀತಿಯ ಕೆಮಿಕಲ್ ಸಿಂಪಡಣೆಯನ್ನು ಮಾಡುವುದಿಲ್ಲ. ಸುಳ್ಳು ಸಂದೇಶಕ್ಕೆ ಕಿವಿಗೊಡಬೇಡಿ ಎಂದು ಅಭಯ ನೀಡಿದೆ.

ಬುಧವಾರ ಮಧ್ಯಾಹ್ನ 3 ಗಂಟೆವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 147 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 14 ಜನರು ಚೇತರಿಸಿಕೊಂಡರೆ ಮೂರು ಮೃತಪಟ್ಟಿದ್ದಾರೆ. ಉಳಿದಂತೆ 130 ಜನರಿಗೆ ಚಿಕಿತ್ಸೆ ಕೊಡಲಾಗುತ್ತದೆ. ರಾಜ್ಯದಲ್ಲಿ ಮತ್ತೆರಡು ಕೊರೊನಾ ಕೇಸ್ ದಾಖಲಾಗಿದೆ. ಇಬ್ಬರು ಬೆಂಗಳೂರಿನವರಾಗಿದ್ದು ಪ್ರತ್ಯೇಕ ನಿಗಾದಲ್ಲಿ ಇಡಲಾಗಿದೆ. ಈ ಕೇಸ್ ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

56 ವರ್ಷದ ವ್ಯಕ್ತಿ ಮಾರ್ಚ್ 6ರಂದು ಅಮೆರಿಕದಿಂದ ಹಿಂದಿರುಗಿದ್ದರು. 25 ವರ್ಷದ ಮಹಿಳೆ ಸ್ಪೇನ್ ಪ್ರವಾಸದಿಂದ ಹಿಂದಿರುಗಿದ್ದು, ಇಬ್ಬರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

13 ಕೊರೊನಾ ಪೀಡಿತರ ಪೈಕಿ ಈಗಾಗಲೇ ಮೊದಲ ರೋಗಿಯಾಗಿ ದಾಖಲಾಗಿದ್ದ ಟೆಕ್ಕಿ, ಟೆಕ್ಕಿಯ ಪತ್ನಿ, ಮಗಳು ಗುಣಮುಖರಾಗಿದ್ದಾರೆ. ಕಲಬುರಗಿಯ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು ರಾಜ್ಯದಲ್ಲಿ 9 ಮಂದಿ ಕೊರೊನಾ ಪೀಡಿತರಿದ್ದು ಬೆಂಗಳೂರಿನಲ್ಲಿ 7 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಕಲಬುರಗಿಯಲ್ಲಿ ಇಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

9 ಮಂದಿ ಯಾರೆಲ್ಲ?
1. ಮೈಂಡ್ ಟ್ರೀ ಕಂಪನಿಯ ಟೆಕ್ಕಿ
2. ಗೂಗಲ್ ಕಂಪನಿಯ ಟೆಕ್ಕಿ
3. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಮಗಳು
4. ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಜೊತೆ ಪ್ರಯಾಣಿಸಿದ ಸಹೋದ್ಯೋಗಿ
5. ಯುಕೆ ಪ್ರವಾಸದಿಂದ ಹಿಂದಿರುಗಿದ ವಿದ್ಯಾರ್ಥಿನಿ
6. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ವೈದ್ಯ
7. ದುಬೈನಿಂದ ಮರಳಿದ್ದ 67 ವರ್ಷದ ಮಹಿಳೆ
8. ಅಮೆರಿಕದಿಂದ ಮರಳಿದ್ದ 56 ವರ್ಷದ ವ್ಯಕ್ತಿ
9. ಸ್ಪೇನ್ ದೇಶದಿಂದ ಮರಳಿದ್ದ 25 ವರ್ಷದ ಮಹಿಳೆ

Comments

Leave a Reply

Your email address will not be published. Required fields are marked *