ಐಪಿಎಲ್ ತರಬೇತಿ ಶಿಬಿರ ರದ್ದುಗೊಳಿಸಿದ ಫ್ರಾಂಚೈಸಿಗಳು- ಮನೆಗಳಿಗೆ ಹಿಂದಿರುಗಿದ ಆಟಗಾರರು

ಮುಂಬೈ: ಕೊರೊನಾ ವೈರಸ್ ಕಾರಣದಿಂದ 2020ರ ಐಪಿಎಲ್ ಆವೃತ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಬಿಸಿಸಿಐ, ಟೂರ್ನಿಯನ್ನು ರೀ ಶೆಡ್ಯೂಲ್ ಮಾಡುವ ಕಾರ್ಯದಲ್ಲಿದೆ. ಇದರ ನಡುವೆಯೇ ದೇಶ ವ್ಯಾಪ್ತಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತಿರುವ ಐಪಿಎಲ್ ಫ್ರಾಂಚೈಸಿಗಳು ಆಟಗಾರರ ತರಬೇತಿ ಶಿಬಿರಗಳನ್ನು ರದ್ದುಗೊಳಿಸಿವೆ.

ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ತಾತ್ಕಾಲಿಕವಾಗಿ ಏ.15ಕ್ಕೆ ವಿಸ್ತರಣೆ ಮಾಡಿದ ಮೂರು ದಿನಗಳ ಬಳಿಕ ಫ್ರಾಂಚೈಸಿಗಳು ತರಬೇತಿ ಶಿಬಿರಗಳನ್ನು ರದ್ದುಪಡಿಸಿವೆ. ಸೋಮವಾರ ಆರ್‌ಸಿಬಿ ತಂಡ ತರಬೇತಿ ಶಿಬಿರವನ್ನು ರದ್ದು ಪಡಿಸಿದ್ದು, ಚೆನ್ನೈ, ಕೋಲ್ಕತ್ತಾ ಹಾಗೂ ಮುಂಬೈ ತಂಡಗಳ ಶಿಬಿರಗಳು ಈಗಾಗಲೇ ರದ್ದುಗೊಳಿಸಲಾಗಿದೆ.

ಆಟಗಾರರು ಹಾಗೂ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಮಾರ್ಚ್ 21ರಿಂದ ಆರಂಭವಾಗಬೇಕಿದ್ದ ತರಬೇತಿ ಶಿಬಿರವನ್ನು ಮುಂದಿನ ಆದೇಶವರೆಗೂ ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ನೀಡಿರುವ ಸೂಚನೆಗಳ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆ ವಹಿಸಕೊಳ್ಳಬೇಕಾಗಿ ಮನವಿ ಮಾಡುತ್ತಿರುವುದಾಗಿ ಆರ್‌ಸಿಬಿ ತನ್ನ ಟ್ವೀಟ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಐಪಿಎಲ್‍ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಶನಿವಾರ ತರಬೇತಿ ಶಿಬಿರವನ್ನು ರದ್ದು ಮಾಡಿದ್ದು, ತರಬೇತಿ ನಿಮಿತ್ತ ಚೆನ್ನೈ ಆಗಮಿಸಿದ್ದ ಸಿಎಸ್‍ಕೆ ತಂಡದ ನಾಯಕ ಧೋನಿ ಕೂಡ ತವರಿಗೆ ಮರಳಿದ್ದಾರೆ. ಐಪಿಎಲ್ ಪಂದ್ಯ ಆಯೋಜಿಸಲು ಮೂರು ರಾಜ್ಯಗಳು ಅನುಮತಿ ನಿರಾಕರಣೆ ಹಾಗೂ ಕೇಂದ್ರ ಸರ್ಕಾರ ವಿದೇಶಿ ವೀಸಾ ರದ್ದು ಮಾಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು.

ಇತ್ತ ಫ್ರಾಂಚೈಸಿಗಳು ಏಪ್ರಿಲ್ 15ರ ವೇಳೆಗೆ ಲೀಗ್ ಆರಂಭವಾಗುವ ವಿಶ್ವಾಸದಲ್ಲಿದ್ದಾರೆ. ಬಿಸಿಸಿಐ ಕೂಡ ಟೂರ್ನಿಯನ್ನು ಆರಂಭಿಸಲು 5 ದಿನಾಂಕಗಳ ಪ್ರಸ್ತಾಪವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಏ.14 ರಂದು ಫ್ರಾಂಚೈಸಿಗಳೊಂದಿಗೆ ಸಭೆ ನಡೆಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ಬಿಸಿಸಿಐ ಏ.15, ಏ.21, ಏ.25, ಮೇ 1 ಮತ್ತು ಮೇ 5 ರಂದು ಐಪಿಎಲ್ ಆರಂಭಿಸುವ ಕುರಿತು ಪ್ರಸ್ತಾಪಗಳನ್ನು ಮುಂದಿಟ್ಟಿದೆ ಎನ್ನಲಾಗಿದೆ. ಐಪಿಎಲ್ ಮುಂದೂಡಿದ ಹಿನ್ನೆಲೆಯಲ್ಲಿ ಈಗಾಗಲೇ ಕನಿಷ್ಟ 15 ದಿನಗಳನ್ನು ಬಿಸಿಸಿಐ ಕಳೆದುಕೊಂಡಿದೆ. ಆದ್ದರಿಂದ ಟೂರ್ನಿಯ ಪಂದ್ಯಗಳ ಸಂಖ್ಯೆಯಲ್ಲೂ ಕಡಿತ ಮಾಡುವ ಯೋಚನೆ ಬಿಸಿಸಿಐ ಮುಂದಿದೆ.

Comments

Leave a Reply

Your email address will not be published. Required fields are marked *