ಗಲ್ಲು ತಡೆ ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಭಯಾ ರೇಪಿಸ್ಟ್‌ಗಳು

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೂವರು ದೋಷಿಗಳು ತಮ್ಮ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳು ಗಲ್ಲು ಶಿಕ್ಷಿಯಿಂದ ತಪ್ಪಿಸಿಕೊಳ್ಳಲು ದಿನಕ್ಕೊಂದು ನಾಟಕವಾಡುತ್ತಿದ್ದು, ರಾಷ್ಟ್ರಪತಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಹೀಗೆ ವಿವಿಧೆಡೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಎಲ್ಲ ಅರ್ಜಿಗಳು ತಿರಸ್ಕøತವಾಗುತ್ತಿದೆ. ಈ ಮಧ್ಯೆ ಈಗ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲು ಈಗಾಗಲೇ ದೆಹಲಿ ನ್ಯಾಯಾಲಯ ಆದೇಶಿಸಿದ್ದು, ಇದೀಗ ದೋಷಿಗಳು ತಮ್ಮ ಕಳ್ಳಾಟವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಅಕ್ಷಯ್ ಸಿಂಗ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಅವರು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬೆಳಗ್ಗೆಯಷ್ಟೇ ಗಲ್ಲು ಶಿಕ್ಷೆಗೊಳಗಾಗಿರುವ ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ನ್ಯಾಯಾಧೀಶ ಅರುಣ್ ಮಿಶ್ರಾ ಹಾಗೂ ಎಂ.ಆರ್.ಶಾ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿ, ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿ ತಿರಸ್ಕರಿಸಿದೆ.

ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ವೃಂದಾ ಗ್ರೋವರ್ ತಪ್ಪು ಮಾಹಿತಿ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖೇಶ್ ಅರ್ಜಿ ಸಲ್ಲಿಸಿದ್ದ. ಆದರೆ ಈ ಆರೋಪದ ಕುರಿತು ದ್ವಿಸದಸ್ಯರ ಪೀಠ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮುಖೇಶ್ ಪರ ವಕೀಲ ಎಂ.ಎಲ್.ಶರ್ಮಾ ಅವರು ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸಿದರು. ಹೀಗಾಗಿ ಮುಖೇಶ್ ಈ ಅರ್ಜಿಯನ್ನು ಹಿಂಪಡೆದಿದ್ದಾನೆ.

ಈ ವೇಳೆ ಅರ್ಜಿಯಲ್ಲಿ ಮಾಡಲಾದ ಸಹಿ ಕುರಿತು ಪ್ರಶ್ನಿಸಿದ ನ್ಯಾಯಾಧೀಶರು, ಮುಖೇಶ್ ಅಫಿಡೆವಿಟ್‍ನಲ್ಲಿ ಆತ ಸಹಿ ಮಾಡಿಲ್ಲ. ಬದಲಿಗೆ ಆತನ ಸಹೋದರ ಸುರೇಶ್ ಅರ್ಜಿಗೆ ಸಹಿ ಮಾಡಿದ್ದಾನೆ. ನೀವು ಸಲ್ಲಿಸಿದ ಅರ್ಜಿಗೆ ಸುರೇಶ್ ಹೇಗೆ ಸಹಿ ಮಾಡಿದ, ಜೈಲಿನಲ್ಲಿ ಏನಾಯಿತು ಎಂಬುದು ಅವನಿಗೆ ಹೇಗೆ ಗೊತ್ತಾಯಿತು? ಇದು ಮುಖೇಶ್‍ಗೆ ತಿಳಿದಿಲ್ಲವೆಂದು ಅವನಿಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದರು. ಮುಖೇಶ್ ಪರವಾಗಿ ಆತ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಇದು ಮುಖೇಶ್ ಸಲ್ಲಿಸಿದ್ದ ಅರ್ಜಿ. ಈ ಅರ್ಜಿಯನ್ನು ನೀವೇ ಹಿಂಪಡೆಯುತ್ತಿರೋ ಅಥವಾ ನಾವೇ ವಜಾ ಮಾಡಬೇಕೇ ಎಂದು ನ್ಯಾಯಾಧೀಶ ಅರುಣ್ ಮಿಶ್ರಾ ದೋಷಿಗಳ ಪರ ವಕೀಲ ಶರ್ಮಾ ಅವರನ್ನು ಪ್ರಶ್ನಿಸಿತ್ತು.

ನೀವು ಈ ನ್ಯಾಯಾಲಯದ ವಕೀಲರ ವಿರುದ್ಧ ವಂಚನೆಯ ಗಂಭೀರ ಆರೋಪ ಮಾಡುತ್ತಿದ್ದೀರಿ. ನಿಮ್ಮ ಜ್ಞಾನದ ಮೂಲ ಯಾವುದು? ಜೈಲಿನಲ್ಲಿ ಏನಾಯಿತು ಎಂಬ ವೈಯಕ್ತಿಕ ವಿಚಾರ ಸುರೇಶ್‍ಗೆ ಹೇಗೆ ಗೊತ್ತಾಯಿತು ಎಂದು ಮುಖೇಶ್ ಪರ ವಕೀಲ ಶರ್ಮಾ ಅವರನ್ನು ಪ್ರಶ್ನಿಸಿತು.

ಮರಣದಂಡನೆ ಶಿಕ್ಷೆಗೆ ಗುರಿಯಾದ ಒಂದು ವಾರದಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯದ ಮಧ್ಯಸ್ಥಿಕೆದಾರೆ(ಅಮಿಕಸ್ ಕ್ಯೂರಿ) ವಕೀಲೆ ವೃಂದಾ ಗ್ರೋವರ್ ತಪ್ಪು ಮಾಹಿತಿ ನೀಡಿದ್ದರು. ಅಲ್ಲದೆ, ಯಾವುದೇ ಮರು ಪರಿಶೀಲನಾ ಅರ್ಜಿ ತಿರಸ್ಕೃತವಾದ 3 ವರ್ಷಗಳವರೆಗೂ ಕ್ಯುರೇಟಿವ್ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಹೀಗಾಗಿ, ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಕೆಗೆ 2021ರ ಜುಲೈವರೆಗೂ ಅವಕಾಶ ಕಲ್ಪಿಸಬೇಕು ಎಂದು ತನ್ನ ವಕೀಲರ ಮೂಲಕ ಮುಖೇಶ್ ಕೋರಿದ್ದ.

Comments

Leave a Reply

Your email address will not be published. Required fields are marked *