ವಿಂಗ್ಸ್ ಇಂಡಿಯಾ 2020- ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಶಸ್ತಿ

ಹುಬ್ಬಳ್ಳಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅಡಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಉತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೇಂದ್ರ ಸರ್ಕಾರದ ವಿಮಾನಯಾನ ಮಂತ್ರಾಲಯವು, ಭಾರತೀಯ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ಹೈದರಾಬಾದ್‍ನ ಬೇಗಂಪೇಟೆಯಲ್ಲಿ ಮಾರ್ಚ್ 12ರಿಂದ 15ರವರೆಗೆ ಆಯೋಜಿಸಿರುವ ಏಷ್ಯಾದ ಅತಿದೊಡ್ಡ ವಿಮಾನಯಾನ ಕುರಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಮಾರ್ಚ್ 13ರಂದು ಹೋಟೆಲ್ ತಾಜ್ ಕೃಷ್ಣಾದಲ್ಲಿ ನಡೆದ ಸಮಾರಂಭದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಠಾಕ್ರೆ ಪ್ರಶಸ್ತಿ ಸ್ವೀಕರಿಸಿದರು.

ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಎರಡನೇ ಹಂತದ ಯೋಜನೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿವಿಧ ನಾಲ್ಕು ವಿಮಾನ ಸಂಸ್ಥೆಗಳಿಂದ 9 ಮಾರ್ಗಗಳನ್ನು ನೀಡಲಾಗಿದೆ. ಈ ಹಿಂದೆ ನೀಡಲಾಗಿದ್ದ ಎಲ್ಲಾ 8 ಮಾರ್ಗಗಳನ್ನು ಈ ನಿಲ್ದಾಣ ಸಮರ್ಥವಾಗಿ ನಿರ್ವಹಿಸಿದೆ. ಪ್ರತಿವರ್ಷ ಉತ್ತಮ ಪ್ರಗತಿ ಹೊಂದುತ್ತಿದೆ. 2017-18 ಹಾಗೂ 2018-19ರ ಅವಧಿಯಲ್ಲಿ ವಿಮಾನ ಸಂಚಾರ ಬೆಳವಣಿಗೆಯು ಶೇ 500ರಷ್ಟು ಹಾಗೂ ಪ್ರಯಾಣಿಕರ ಓಡಾಟವೂ ಸಹ ಶೇ 800ರಷ್ಟು ವೃದ್ಧಿಯಾಗಿದೆ. 4.6 ಲಕ್ಷ ಪ್ರಯಾಣಿಕರಿಗೆ ಒಟ್ಟು 6,694 ನಿರ್ಧಾರಿತ ಸಂಚಾರಗಳಲ್ಲಿ ಶೇ 85 ರಷ್ಟು ಸೇವೆ ನೀಡಲಾಗಿದೆ.

ನಿರಂತರ ಪ್ರಯತ್ನದ ಪರಿಣಾಮವಾಗಿ 2019-20ನೇ ಸಾಲಿನಲ್ಲಿ ಕಳೆದ ಜನವರಿ ಅಂತ್ಯದವರೆಗೆ 4.11 ಲಕ್ಷ ಜನರಿಗೆ ಸೇವೆ ನೀಡಲಾಗಿದೆ. ಈ ಆರ್ಥಿಕ ವರ್ಷಾಂತ್ಯಕ್ಕೆ 5 ಲಕ್ಷ ಜನರನ್ನು ತಲುಪುವ ನಿರೀಕ್ಷೆ ಇದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೂ ಸಹ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಶಸ್ತಿ ದೊರೆಯಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಆಡಳಿತ ಮಂಡಳಿ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ಭಾಗೀದಾರರು ನೀಡಿದ ಸಹಕಾರವೂ ಕಾರಣವಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್ ಠಾಕ್ರೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *