ಸಿಎಂ ಪ್ರವಾಸವೇ ರದ್ದು, ಆದ್ರೆ ಆರೋಗ್ಯ ಸಚಿವರ ತೀರ್ಥಯಾತ್ರೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನರ್ತನ ಹೆಚ್ಚಾಗಿದೆ. ಕೊರೊನಾಗೆ ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಲಿ ಪಡೆದಿದೆ. ಇದು ರಾಜ್ಯ ದೇಶವನ್ನೇ ತಲ್ಲಣಗೊಳಿಸಿದೆ. ಆದರೆ ನಮ್ಮ ರಾಜ್ಯದ ಆರೋಗ್ಯ ಸಚಿವರಿಗೆ ತೀರ್ಥಯಾತ್ರೆ ಜಪದೊಂದಿಗೆ ತಿರುಪತಿಗೆ ಜಿಗಿದಿದ್ದಾರೆ. ಸಿಎಂ ಯಡಿಯೂರಪ್ಪ ಅವರೇ ತಮ್ಮ ಪ್ರವಾಸ ರದ್ದು ಮಾಡಿದರೆ, ಸಚಿವರು ಮಾತ್ರ ಕೇರ್ ಮಾಡಿಲ್ಲ.

ಅಂದಹಾಗೆ ವಿಧಾನಸೌಧದಲ್ಲಿ ಇವತ್ತು ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ನಾವು ನಮ್ಮ ಸಚಿವರು ಅಗತ್ಯ ಕ್ರಮಗಳನ್ನ ಕೈಗೊಳ್ಳುತ್ತೇವೆ. ಯಾವುದೇ ಪ್ರವಾಸ ತೆರಳದೇ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತೇವೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಎರಡು ದಿನಗಳ ನನ್ನ ಪ್ರವಾಸವನ್ನೇ ರದ್ದು ಮಾಡುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲ ಸಚಿವರುಗಳ ಸಾರ್ವಜನಿಕ ಕಾರ್ಯಕ್ರಮ, ಹೊರರಾಜ್ಯಗಳ ಪ್ರವಾಸವನ್ನು ರದ್ದುಗೊಳಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಇಷ್ಟಾದಾರೂ ಮಾತ್ರ ಆರೋಗ್ಯ ಸಚಿವ ಶ್ರೀರಾಮುಲು ತಿರುಪತಿ ಸನ್ನಿಧಿಗೆ ತೆರಳಿದ್ದಾರೆ.

ವಿಧಾನಸೌಧದಲ್ಲಿ ಇವತ್ತು ಸಿಎಂ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಆ ಬಳಿಕ ನಾಪತ್ತೆ. ಎಲ್ಲಿ ಹೋದರು ಎಂದು ಹುಡುಕುತ್ತಿದ್ದಾಗಲೇ ರಾಮುಲು ಸಂಜೆಯೇ ತಿರುಪತಿಗೆ ಹಾರಿದ್ದು ತಿಳಿದುಬಂತು. ಇವತ್ತು ರಾತ್ರಿ ತಿರುಪತಿಯಲ್ಲೇ ವಾಸ್ತವ್ಯ ಹೂಡುವ ರಾಮುಲು ನಾಳೆ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ. ಹಾಗಾಗಿ ನಾಳೆ ಸಂಜೆ ತನಕ ರಾಜ್ಯದಲ್ಲಿ ಶ್ರೀರಾಮುಲು ಸಿಗಲ್ಲ ಎನ್ನಲಾಗಿದ್ದು, ಕೊರೊನಾ ನರ್ತನದ ನಡುವೆ ಆರೋಗ್ಯ ಸಚಿವರ ತೀರ್ಥಯಾತ್ರೆ ಸರಿಯೇ ಎಂಬ ಪ್ರಶ್ನೆ ಎದ್ದಿದೆ.

Comments

Leave a Reply

Your email address will not be published. Required fields are marked *