ಕೊರೊನಾ ವೈರಸ್ ಭೀತಿಯಿಂದ ಉಳಿಯಿತು ನೂರಾರು ಜನರ ಪ್ರಾಣ

ಹಾಸನ: ರಾಜ್ಯಾದ್ಯಂತ ಕೊರೊನಾ ವೈರಸ್ ಆತಂಕ ಉಂಟು ಮಾಡಿದರೆ, ಅದೇ ಕೊರೊನಾ ಆತಂಕ ಇಂದು ನೂರಾರು ಜನರ ಪ್ರಾಣ ಉಳಿಸಿದೆ.

ಹೌದು. ಹಾಸನ ನಗರದ ಹೊಸ ಬಸ್ ನಿಲ್ದಾಣದಿಂದ, ಎನ್‍ಆರ್ ಸರ್ಕಲ್‍ವರೆಗೆ ಸುಮಾರು 42 ಕೋಟಿ ವೆಚ್ಚದಲ್ಲಿ ನೂತನ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿತ್ತು. ಕಳಪೆ ಕಾಮಗಾರಿಯ ಪರಿಣಾಮ ನಿರ್ಮಾಣ ಹಂತದಲ್ಲಿರುವಾಗಲೇ ಹೊಸ ಬಸ್ ನಿಲ್ದಾಣದ ಬಳಿ ಫ್ಲೈ ಓವರ್ ಕುಸಿದು ಬಿದ್ದಿದೆ.

ಸಾಮಾನ್ಯ ದಿನಗಳಲ್ಲಿ ಫ್ಲೈ ಓವರ್ ಸಮೀಪವೇ ರಸ್ತೆ ಬದಿ ಹತ್ತಾರು ಕ್ಯಾಂಟೀನ್‍ಗಳಲ್ಲಿ ಆಹಾರ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಉರುಳಿಬಿದ್ದ ಫ್ಲೈ ಓವರ್ ಬಳಿ ಪ್ರತಿದಿನ ಸಾವಿರಾರು ಜನ ಆಹಾರ ಸೇವಿಸುತ್ತಿದ್ದರು. ಆಹಾರ ಸೇವಿಸುವಾಗ ಅಥವಾ ಆಹಾರ ಸೇವಿಸಿದ ನಂತರ ಫ್ಲೈ ಓವರ್ ಕೆಳಗಿನ ನೆರಳಿನಲ್ಲಿ ಜನರು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕ್ಯಾಂಟೀನ್ ಸಂಪೂರ್ಣ ಮುಚ್ಚುವಂತೆ ಜಿಲ್ಲಾಡಳಿತ ಸೂಚಿಸಿತ್ತು.

ಸೂಚನೆಯ ಹಿನ್ನೆಲೆಯಲ್ಲಿ ಕ್ಯಾಂಟೀನ್‍ಗಳು ಕ್ಲೋಸ್ ಆಗಿದ್ದರಿಂದ ಫ್ಲೈ ಓವರ್ ಬಳಿ ಯಾವುದೇ ಜನರು ಇರಲಿಲ್ಲ. ಹೀಗಾಗಿ ಇಂದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಫ್ಲೈ ಓವರ್ ಕುಸಿತದ ಬಗ್ಗೆ ಆಕ್ರೋಶ ಹೊರಹಾಕಿರುವ ಸಾರ್ವಜನಿಕರು ಇಡೀ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದೆ ಇಂತಹ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *