ಸೆಲ್ಫಿ ವಿಡಿಯೋ ಮೂಲಕ ಬಾಲ್ಯದ ನೆನಪು ಹಂಚಿಕೊಂಡ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ

ಗದಗ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಟೀಂ ಇಂಡಿಯಾದ ಮಾಜಿ ಆಟಗಾರ ಗದಗದ ಸುನಿಲ್ ಜೋಶಿ ತಮ್ಮ ಬಾಲ್ಯದ ನೆನಪುಗಳನ್ನ ಸೆಲ್ಫಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಬಾಲ್ಯದ ತುಂಟಾಟ, ಶಾಲಾ-ಕಾಲೇಜ್, ಆಟ-ಹುಡುಗಾಟದ ದಿನಗಳನ್ನು ನೆನಪಿಸಿಕೊಂಡು ವಿಡಿಯೋ ಒಂದನ್ನು ಮಾಡಿ ಗದಗದ ವಕೀಲಚಾಳ್ ವಾರಿಯರ್ಸ ವಾಟ್ಸಪ್ ಗ್ರೂಪ್‍ಗೆ ಕಳುಹಿಸಿದ್ದಾರೆ. ಈ ಒಂದು ವಿಡಿಯೋ ಗದಗ ಫ್ರೆಂಡ್ಸ್ ಗ್ರೂಪ್ ಮತ್ತು ಆ ಬಡಾವಣಿಯ ಜನರ ಸಂತಸ ಹೆಚ್ಚಿಸಿದ್ದು, ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಜೋಶಿ ಅವರು ಮಾತನಾಡಿದ್ದು ವಕೀಲಚಾಳ್ ಮಂದಿಯ ಸಂತಸವನ್ನು ಇನ್ನಷ್ಟು ಇಮ್ಮುಡಿಗೊಳಿಸಿದೆ.

ಸುನಿಲ್ ಜೋಷಿ ವಿಡಿಯೋದ ಸಂಭಾಷಣೆ:
ನಮಸ್ಕಾರ ಎಲ್ಲಾ ಗದಗನ ವಕೀಲಚಾಳ್ ವಾರಿಯರ್ಸ್‍ಗೆ. ಏನು ಹೇಳಬೇಕು ಸಿಕ್ಕಾಪಟ್ಟೆ ಖುಷಿ ಆಗ್ತಿದೆ. ಏನಂತಂದ್ರ ವಕೀಲಚಾಳ್‍ದಲ್ಲಿ ಹುಟ್ಟಿ, ವಕೀಲಚಾಳ್‍ನಲ್ಲಿ ನೀರು ಕುಡಿದು, ವಕೀಲಚಾಳ್‍ದಲ್ಲಿ ಬೆಳದು ಇವತ್ತು ನಿಮ್ಮೆಲರ ಪ್ರೋತ್ಸಾಹದಿಂದ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ನಮ್ಮೆಲ್ಲಾ ಸೀನಿಯರ್ಸ್, ನನ್ನ ಸ್ನೇಹಿತರು ಪ್ರೋತ್ಸಾಹಿಸಿದ್ದಾರೆ. ಸ್ನೇಹಿತರ ಜೊತೆ ಗುಂಡಾ ಆಡಿರಬಹುದು, ಚಿಣಿಪಣಿ, ಸರಿಬಡಗಿ, ಛಾಪಾ ಆಡಿರಬಹುದು ಎಲ್ಲಾ ನೆನೆಸಿಕೊಂಡರೆ ಖುಷಿ ಆಗ್ತದ. ಎಲ್ಲಾ ನಿಮ್ಮ ಆಶೀರ್ವಾದ. ಬೆಸ್ಟ್ ವಿಷಸ್ ಅಂದ್ರೆ ನಮ್ಮ ಓಣಿ ಒಳಗ್ ಏನ್ ಒಗ್ಗಟ್ಟು ಇತ್ತು. ಯಾವುದೇ ಹಬ್ಬ ಬರಲಿ, ಕಾರ ಹುಣ್ಣಿಮೆ ಬರಲಿ, ಪಟಾ ಹಾರಸೋದ ಇರಲಿ, ಹೋಳಿ ಹುಣ್ಣಿಮೆ ಬಂದ್ರ ಕಟ್ಟಿಗಿ ಕಳವು ಮಾಡುವುದು ಇರ್ಲಿ, ಎಷ್ಟು ಖುಷಿ ಕೊಡ್ತಿತ್ತು ಅಂದ್ರ ಇವತ್ತಿನ ದಿನ ಈ ಸ್ಟೇಜಿಗೆ ಬಂದಿನಿ ಅಂದ್ರೆ ನಿಮ್ಮೆದೆಲ್ಲಾ ಸಪೋರ್ಟ್ ಕಾರಣ. ನನ್ನ ಜೊತೆ ನಿಮ್ಮ ಆಶಿರ್ವಾದ ಇರಲಿ. ನಾನು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ನೇಮಕಗೊಂಡ ಬಳಿಕ ನನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ. ನಿಮ್ಮ ಪ್ರೀತಿ, ಪ್ರೋತ್ಸಾಹ ನೋಡಿ ಖುಷಿ ಆಗುತ್ತಿದೆ ಎಂದು ತಾವೇ ಒಂದು ಸೆಲ್ಫಿ ವಿಡಿಯೋ ಮಾಡಿ ವಕೀಲಚಾಳ್ ವಾರಿಯರ್ಸ್ ಗ್ರೂಪ್‍ನಲ್ಲಿ ಹಾಕಿದ್ದಾರೆ.

ದೊಡ್ಡ ಸ್ಥಾನದಲ್ಲಿ ಇದ್ದರೂ ಸಹ ಬಾಲ್ಯದ ದಿನಗಳನ್ನು ಮರೆಯದೆ, ನೆನಪಿನಲ್ಲಿ ಇಟ್ಟುಕೊಂಡಿರುವ ಸುನಿಲ್ ಜೋಶಿ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ ಅಂತ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *