ಕೊರೊನಾ ಎಫೆಕ್ಟ್: ಪ್ರಾಥಮಿಕ ಶಾಲೆ, ಅಂಗನವಾಡಿಗಳಿಗೂ ರಜೆ

ಬೆಂಗಳೂರು: ಕೊರೊನಾ ವೈರಸ್ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪತ್ತೆಯಾಗಿದ್ದು, ಜನತೆ ಆತಂಕದಲ್ಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರುನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

1-9 ನೇ ತರಗತಿವರೆಗಿನ ಪರೀಕ್ಷೆ ಶೀಘ್ರವೇ ಮುಗಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

1-5 ನೇ ತರಗತಿ – ಮಾರ್ಚ್ 11 ರಿಂದ 16 ವರೆಗೆ ಪರೀಕ್ಷೆ ಮುಗಿಸಬೇಕು. 6-9 ನೇ ತರಗತಿ- ಮಾರ್ಚ್ 23 ರ ಒಳಗೆ ಮುಗಿಸಬೇಕು. 10 ನೇ ತರಗತಿ ಮೊದಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಮುಗಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರೀ ನರ್ಸರಿ, ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ರಜೆ ಘೋಷಣೆಯಾದ ಬೆನ್ನಲ್ಲೇ ಅಂಗನವಾಡಿಗಳಿಗೂ ರಜೆ ನೀಡಿ ಆದೇಶಿಸಲಾಗಿದೆ. ದಿನಾಂಕ 10-03-2020 ರಿಂದ 17-03-2020ರವರೆ ಅಂಗನವಾಡಿಗಳಿಗೆ ರಜೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿ ಸುತ್ತೋಲೆ ಹೊರಡಿಸಿದೆ.

ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವೈದ್ಯಕಿಯ ಇಲಾಖೆ ಸಮಕ್ಷಮದಲ್ಲಿ ರಜೆ ಘೋಷಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ನಾವು ಈಗಾಗಲೇ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಯನ್ನು ನೀಡಿದ್ದೇವೆ ಎಂದು ವೈದ್ಯಕೀಯ ಸಚಿವ ಕೆ.ಸುಧಾಕರ್ ವಿಧಾನಸೌಧದಲ್ಲಿ ತಿಳಿಸಿದ್ದರು.

Comments

Leave a Reply

Your email address will not be published. Required fields are marked *