58 ರನ್‍ಗಳಿಗೆ ಪ್ರಮುಖ 5 ವಿಕೆಟ್ ಪತನ – ಭಾರತಕ್ಕೆ ಹೀನಾಯ ಸೋಲು, ಆಸೀಸ್ ಚಾಂಪಿಯನ್

– ಆಸ್ಟ್ರೇಲಿಯಾಗೆ 85 ರನ್‍ಗಳ ಭರ್ಜರಿ ಜಯ
– ಒಂದೇ ಒಂದು ಸಿಕ್ಸ್ ಸಿಡಿಸದ ಭಾರತ
– ಮತ್ತೆ ಕೌರ್, ಮಂದಾನ ವೈಫಲ್ಯ

ಮೆಲ್ಬರ್ನ್: ನಾಯಕಿ ಹರ್ಮನ್‍ಪ್ರೀತ್ ಕೌರ್ ಹಾಗೂ ಅನುಭವಿ ಆಟಗಾರ್ತಿ ಸ್ಮøತಿ ಮಂದಾನ ಅವರ ಬ್ಯಾಟಿಂಗ್ ವೈಫಲ್ಯದಿಂದ ಭಾರತ ಹೀನಾಯ ಸೋಲು ಕಂಡಿದ್ದು ಆಸ್ಟ್ರೇಲಿಯಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

185 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರಿನಲ್ಲಿ 99 ರನ್‍ಗಳಿಗೆ ಸರ್ವಪತನ ಕಂಡಿತು. 85 ರನ್ ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಭಾರತ ಪರ ದೀಪ್ತಿ ಶರ್ಮಾ 33 ರನ್ (35 ಎಸೆತ, 2 ಬೌಂಡರಿ), ವೇದಾ ಕೃಷ್ಣಮೂರ್ತಿ 19 ರನ್ (24 ಎಸೆತ, 1 ಬೌಂಡರಿ) ಹಾಗೂ ರೀಚಾ ಘೋಷ್ 18 ರನ್, (18 ಎಸತ, 2 ಬೌಂಡರಿ) ಗಳಿಸಿದರು. ಈ ಪಂದ್ಯದಲ್ಲಿ ಭಾರತದ ಯಾವುದೇ ಆಟಗಾರ್ತಿಯರು ಒಂದೇ ಒಂದು ಸಿಕ್ಸ್ ಸಿಡಿಸಲಿಲ್ಲ.

ಆಸ್ಟ್ರೇಲಿಯಾ ನೀಡಿದ್ದ 185 ರನ್‍ಗಳ ಬೃಹತ್‍ವನ್ನು ಬೆನ್ನಟ್ಟಿದ ಭಾರತ ಮೊದಲ ಓವರಿನಲ್ಲೇ 2 ರನ್ ಬಾರಿಸಿದ್ದ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡು ಆಘಾತಕ್ಕೆ ತುತ್ತಾಯಿತು. ಈ ಬೆನ್ನಲ್ಲೇ ಮೈದಾನಕ್ಕಿಳಿದ ತಾನಿಯಾ ಭಾಟಿಯಾ ಗಾಯಗೊಂಡು ನಿವೃತ್ತಿ ಆದರು. ಆಗ ಬ್ಯಾಟಿಂಗ್ ಇಳಿದ ಜೆಮಿಮಾ ರೊಡ್ರಿಗಸ್ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಜೊತೆಗೆ ಅನುಭವಿ ಆಟಗಾರ್ತಿ ಸ್ಮೃತಿ ಮಂದಾನ 11 ರನ್ (8 ಎಸೆತ, 2 ಬೌಂಡರಿ) ಗಳಿಸಿ ಔಟಾದರು.

ಕೌರ್ ವೈಫಲ್ಯ:
ಕೇವಲ 18 ರನ್‍ಗಳಿಗೆ 3ನೇ ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಭೀತಿಗೆ ಸಿಲುಕಿತು. ಈ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ತೋರಿದ ಭಾರತದ ನಾಯಕಿ ಹರ್ಮನ್‍ಪ್ರೀತ್ ಕೌರ ಫೈನಲ್ ಪಂದ್ಯದಲ್ಲೂ ತಂಡಕ್ಕೆ ಆಸರೆಯಾಗುವಲ್ಲಿ ವಿಫಲರಾದರು. ಕೌರ್ 4 ರನ್ (7 ಎಸೆತ, 1 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ತಂಡದ ಸೋಲು ದೃಢವಾಗಿತ್ತು.

ಕನ್ನಡತಿ ವೇದಾ ಕೃಷ್ಣಮೂರ್ತಿ ಹಾಗೂ ದೀಪ್ತಿ ಶರ್ಮಾ 5ನೇ ವಿಕೆಟ್‍ಗೆ 28 ರನ್‍ಗಳ ಜೊತೆಯಾಟವಾಡಿದರು. ಬಿರುಸಿನ ಹೊಡೆತಕ್ಕೆ ಮುಂದಾದ ವೇದಾ ಕೃಷ್ಣಮೂರ್ತಿ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 11 ರನ್ ಗಳಿಗೆ ಕೊನೆಯ ನಾಲ್ಕು ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಭಾರತ ಸರ್ವಪತನ ಕಂಡಿತು.

ಭಾರತದ ವಿಕೆಟ್ ಪತನ:
ಮೊದಲ ವಿಕೆಟ್- 2 ರನ್
ಎರಡನೇ ವಿಕೆಟ್- 8 ರನ್
ಮೂರನೇ ವಿಕೆಟ್- 18 ರನ್
ನಾಲ್ಕನೇ ವಿಕೆಟ್- 30 ರನ್
ಐದನೇ ವಿಕೆಟ್- 58 ರನ್

ಆರನೇ ವಿಕೆಟ್- 88 ರನ್
ಏಳನೇ ವಿಕೆಟ್- 92 ರನ್
ಎಂಟನೇ ವಿಕೆಟ್- 96 ರನ್
ಒಂಬತ್ತನೇ ವಿಕೆಟ್- 97 ರನ್
ಹತ್ತನೇ ವಿಕೆಟ್- 99 ರನ್

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಆರಂಭಿಕ ಆಟಗಾರ್ತಿಯಾರದ ಅಲೀಸಾ ಹೀಲಿ ಮತ್ತು ಬೆಥ್ ಮೂನಿ ಶತಕದ ಜೊತೆಯಾಟವಾಡಿದಿಂದ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೀಲಿ 30 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಹೀಲಿ 75 ರನ್ (39 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ಔಟಾದರೆ ನಾಯಕಿ ಮೆಗ್ ಲ್ಯಾನಿಂಗ್ 16 ರನ್ ಗಳಿಸಿದಾಗ ದೀಪ್ತಿ ಶರ್ಮಾ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು.

ನಂತರ ಬಂದ ಆಶ್ಲೆ ಗಾರ್ಡ್‍ನರ್ 2 ರನ್, ರೇಚಲ್ ಹೇನ್ಸ್ 4 ರನ್ ಗಳಿಸಿ ಔಟಾಗಿದ್ದರು. ಒಂದು ಕಡೆ ವಿಕೆಟ್ ಉರುಳಿದರೂ ಗಟ್ಟಿ ನಿಂತು ಆಟವಾಡಿದ ಬೆಥ್ ಮೂನಿ ಔಟಾಗದೇ 78 ರನ್ (54 ಎಸೆತ, 10 ಬೌಂಡರಿ) ಹೊಡೆದು ರನ್ ಏರಿಸಲು ಸಹಾಯ ಮಾಡಿದ್ದರು. ಒಂದು ಹಂತದಲ್ಲಿ 16 ಓವರ್ ಗಳಲ್ಲಿ 154 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ 22 ರನ್ ಗಳಿಸುವಷ್ಟರಲ್ಲಿ ಅಮೂಲ್ಯವಾದ 3 ವಿಕೆಟ್ ಕಳೆದುಕೊಂಡಿತ್ತು.

ಇದೇ ಸಮಯದಲ್ಲಿ ಇತರೇ ರೂಪದಲ್ಲಿ 4 ರನ್ (ಬೈ 1, ನೋಬಾಲ್ 1, ವೈಡ್ 2) ಬಂದರೂ ಭಾರತ ಬೌಲರ್ ಗಳು ದುಬಾರಿ ರನ್ ಬಿಟ್ಟುಕೊಟ್ಟರು. ಶಿಖಾ ಪಾಂಡೆ 4 ಓವರ್ ಎಸೆದು 52 ರನ್ ನೀಡಿದರೆ, ದೀಪ್ತಿ ಶರ್ಮಾ 38 ರನ್ ನೀಡಿದ್ದರು. ರಾಜೇಶ್ವರಿ ಗಾಯಕ್ವಾಡ್ 29 ರನ್, ಪೂನಂ ಯಾದವ್ 30, ರಾಧಾ ಯಾದವ್ 34 ರನ್ ಬಿಟ್ಟಿಕೊಟ್ಟರು. ದೀಪ್ತಿ ಶರ್ಮಾ 2 ವಿಕೆಟ್ ಕಿತ್ತರೆ, ಪೂನಂ ಯಾದವ್ ಮತ್ತು ರಾಧಾ ಯಾದವ್ ತಲಾ 1 ವಿಕೆಟ್ ಪಡೆದಿದ್ದರು.

Comments

Leave a Reply

Your email address will not be published. Required fields are marked *