ಕೊರೊನಾ ಅಲ್ಲ ನಮ್ಮಲ್ಲಿ ಕರುಣಾಕರ ರೆಡ್ಡಿ ಇದ್ದಾರೆ: ಪ್ರಭು ಚೌಹಾನ್

 

ಯಾದಗಿರಿ: ಕೊರೊನಾ ಅಲ್ಲ ನಮ್ಮಲ್ಲಿ ಕರುಣಾಕರ ರೆಡ್ಡಿ ಇದ್ದಾರೆ. ಯಾದಗಿರಿ ಬಿಸಿಲಿಗೆ ಕೊರೊನಾ ಬರುವುದಿಲ್ಲ ಎಂದು ಪಶುಸಂಗೋಪನೆ ಸಚಿವ, ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚೌಹಾನ್ ಹೇಳಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯ ಕೊರೊನಾ ವೈರಸ್ ವಿಶೇಷ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ, ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಈ ಬಗ್ಗೆ ಮಾತನಾಡಿದ ಅವರು, ಯಾದಗಿರಿಯಲ್ಲಿ ಬಿಸಿಲು ಹೆಚ್ಚಿದೆ ಕೊರೊನಾ ವೈರಸ್ ಭಯಪಡುತ್ತದೆ. ಇಲ್ಲಿನ ಬಿಸಿಲಿಗೆ ಕೊರೊನಾ ಸತ್ತು ಹೋಗುತ್ತೆ ಎಂದರು.

ಕೊರೊನಾ ವೈರಸ್‍ಗೆ ಯಾವುದೇ ರೀತಿಯಲ್ಲಿ ಬೆದರುವ ಅಗತ್ಯವಿಲ್ಲ. ಕೊರೊನಾ ಎಲ್ಲೆಡೆ ಚರ್ಚೆಯಾಗ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ವಿನಾಕಾರಣ ಸುದ್ದಿ ಹೊರಡಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ರು.

ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ನಿನ್ನೆಯವರೆಗಿನ ಲೆಕ್ಕಾಚಾರದಲ್ಲಿ ಇಡೀ ವಿಶ್ವಾದ್ಯಂತ ಒಟ್ಟು 1,00,774 ಮಂದಿಗೆ ಸೋಂಕು ತಗುಲಿದೆ. ಸೋಂಕಿನಿಂದಾಗಿ ಇದುವರೆಗೆ 3412 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 55,997 ಮಂದಿ ರೋಗ ಮುಕ್ತರಾಗಿದ್ದು, 41,365 ಮಂದಿಗೆ ಈಗಲೂ ಚಿಕಿತ್ಸೆ ಮುಂದುವರಿದಿದೆ.

ಭಾರತದಲ್ಲಿ ಕೊರೊನಾ ಬಾಧಿತರ ಸಂಖ್ಯೆ 31ಕ್ಕೇರಿದೆ. ಥಾಯ್ಲೆಂಡ್, ಮಲೇಷ್ಯಾ ಪ್ರವಾಸ ಮುಗಿಸಿಕೊಂಡು ವಾಪಸ್ ಬಂದ 25 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

Comments

Leave a Reply

Your email address will not be published. Required fields are marked *