ಯುವತಿಯ ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್‍ಮೇಲ್- ಸಿನಿಮಾ ವಿತರಕ ಅರೆಸ್ಟ್

ಬೆಂಗಳೂರು: ವಿದೇಶದಲ್ಲಿ ಪರಿಚಿತಳಾದ ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಲಕ್ಷ ಲಕ್ಷ ಹಣ ಪೀಕಿದ್ದ ಸಿನಿಮಾ ವಿತರಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ನಿವಾಸಿ ರೂಪೇಶ್ (33) ಬಂಧಿತ ಆರೋಪಿ. ರೂಪೇಶ್ ವಿದೇಶದಲ್ಲಿ ಸ್ಯಾಂಡಲ್‍ವುಡ್ ಸಿನಿಮಾಗಳ ಪ್ರಮೋಷನ್ ಮಾಡುವ ಈವೇಂಟ್ ಮ್ಯಾನೇಜರ್ ಆಗಿದ್ದ. ಹೀಗಾಗಿ ಖ್ಯಾತ ನಟ ನಟಿಯರ ಜೊತೆ ಫೋಟೋ ತೆಗೆಸಿಕೊಂಡು ಹೊರ ದೇಶಗಳಲ್ಲಿ ಕನ್ನಡಿಗರ ಬಳಿ ಪೋಸ್ ಕೊಡುತ್ತಿದ್ದ.

ರೂಪೇಶ್ ಓದಿದ್ದು ಡಿಪ್ಲೋಮೊ, ಮಾಡ್ತಿದ್ದದ್ದು ಈವೆಂಟ್ ಮ್ಯಾನೇಜ್ಮೆಂಟ್ ಕೆಲಸ. ರೂಪೇಶ್ ಮಾತು ಕೇಳಿಯೇ ಕೆಲವರು ಫೀದಾ ಆಗಿಬಿಡುತ್ತಿದ್ದರು. ಹೀಗೆ ಮದುವೆ ಆಗಬೇಕಾದರೂ ದಂತ ವೈದ್ಯೆಯಾಗಿದ್ದ ಯುವತಿಯನ್ನೇ ಪುಸಲಾಯಿಸಿ ವಿದೇಶದಲ್ಲಿ ಕೆಲಸ ಅಂತ ಹೇಳಿ ಮದುವೆಯಾಗಿದ್ದ. ವಿದೇಶದಲ್ಲಿ ಕೆಲಸ ಅಂತ ವರದಕ್ಷಿಣೆ ಜೋರಾಗಿಯೇ ತೆಗೆದುಕೊಂಡಿದ್ದ. ಪತ್ನಿಗೆ ಸ್ಯಾಂಡಲ್‍ವುಡ್ ನಟ ನಟಿಯರ ಜೊತೆಗಿರುವ ಫೋಟೋ ತೋರಿಸಿ ನಂಬಿಸಿದ್ದ.

ಹೊರ ದೇಶದಲ್ಲಿ ಸಿನಿಮಾಗಳನ್ನು ರೂಪೇಶ್ ಪ್ರಮೋಷನ್ ಮಾಡುತ್ತಿದ್ದ. ಇತ್ತೀಚೆಗೆ ಬಿಡುಗಡೆಯಾದ ಅವನೇ ಶ್ರೀಮನ್ನಾರಾಯಣ ಮತ್ತು ಕಿರಿಕ್ ಪಾರ್ಟಿ ಸಿನಿಮಾಗಳನ್ನು ಹೊರ ದೇಶದಲ್ಲಿ ಬಿಡುಗಡೆ ಮಾಡಿಸಿದ್ದ. ಇದೇ ಸಮಯದಲ್ಲಿ ಆಸ್ಟ್ರೇಯಾದಲ್ಲಿ ಬೆಂಗಳೂರು ಮೂಲದ ಯುವತಿ ಪರಿಚಯವಾಗಿದ್ದಳು. ಇದೇ ಸಲುಗೆಯನ್ನ ಬಳಸಿ ಯುವತಿಗೆ ಮತ್ತು ಬರುವ ಪಾನೀಯ ನೀಡಿ ಅಶ್ಲೀಲ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ಕ್ಲಿಕ್ಕಿಸಿಕೊಂಡಿದ್ದ. ಬಳಿಕ ಯುವತಿಗೆ ಫೋಟೊಗಳನ್ನು ತೋರಿಸಿ 6 ಲಕ್ಷ ರೂ. ಪೀಕಿದ್ದ.

ಹಣ ಪಡೆದಿದ್ದು ಅಷ್ಟೇ ಅಲ್ಲದೆ ತನ್ನ ಜೊತೆ ಸಹಕರಿಸುವಂತೆ ಯುವತಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತ ಯುವತಿ ಬೆಂಗಳೂರಿನ ತನ್ನ ಪೋಷಕರ ಮನೆಗೆ ಬಂದಿದ್ದಳು. ಇತ್ತೀಚೆಗೆ ಮತ್ತೆ ರೂಪೇಶ್ ಮನೆ ಬಳಿ ಬಂದು ಹಣ ಕೊಡದಿದ್ದರೂ ಪರವಾಗಿಲ್ಲ ಲೈಂಗಿಕ ಕ್ರಿಯೆಗೆ ಸಹಕರಿಸು ಅಂತ ಟಾರ್ಚರ್ ಕೊಟ್ಟಿದ್ದ. ಆರೋಪಿಯ ವರ್ತನೆಯಿಂದ ಮನನೊಂದ ಯುವತಿ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಳು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ರೂಪೇಶ್ ವಿರುದ್ಧ ಪತ್ನಿಯೂ ದೂರು ಕೊಟ್ಟಿದ್ದಳು. ನನಗೆ ನಂಬಿಸಿ ದ್ರೋಹ ಮಾಡಿ ಮದುವೆಯಾಗಿದ್ದಾನೆ. ಇದೇ ರೀತಿ ಸಾಕಷ್ಟು ಯುವತಿಯರಿಗೆ ತೊಂದರೆ ಕೊಟ್ಟಿದ್ದಾನೆ ಎಂದು ದೂರು ನೀಡಿದ್ದಾಳೆ. ಸದ್ಯ ನಂದಿನಿ ಲೇಔಟ್ ಪೊಲೀಸರು ಆರೋಪಿ ರೂಪೇಶ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *