ಕೊರೊನಾ ವೈರಸ್ ಭೀತಿ- ಕಾರ್ಮಿಕರಿಗೆ ವೇತನ ಸಹಿತ ರಜೆಗೆ ಆದೇಶ

ಬೆಂಗಳೂರು: ವಿಶ್ವಾದ್ಯಂತ ಡೆಡ್ಲಿ ಕೊರೊನಾ ವೈರಸ್ ಭಯದ ವಾತಾವರಣ ಸೃಷ್ಟಿ ಮಾಡಿದೆ. ಕರ್ನಾಟಕದಲ್ಲೂ ವೈರಸ್ ಭೀತಿ ಜನರಲ್ಲಿ ಮನೆ ಮಾಡಿದೆ. ನಿತ್ಯ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ತಪಾಸಣೆ ಮಾಡೋ ಕೆಲಸ ನಡೆಯುತ್ತಿದೆ. ಈಗ ಕಾರ್ಮಿಕ ಇಲಾಖೆ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೊನಾ ವೈರಸ್ ಶಂಕಿತ ವ್ಯಕ್ತಿಗೆ ವೇತನ ಸಹಿತ 28 ದಿನಗಳ ಕಾಲ ರಜೆ ನೀಡುವಂತೆ ಕಾರ್ಮಿಕ ಇಲಾಖೆಗೆ ಆದೇಶ ಹೊರಡಿಸಿದೆ.

ಕೊರೊನಾ ವೈರಸ್ ಹರಡೋದನ್ನ ತಡೆಗಟ್ಟಲು ಕಾರ್ಮಿಕ ಇಲಾಖೆ ಈ ಮಹತ್ವದ ನಿರ್ಧಾರ ಮಾಡಿದೆ. ರಜೆ ಸಹಿತ 28 ದಿನ ರಜೆ ಕೊಡಲೇಬೇಕು ಅಂತ ಸುತ್ತೋಲೆ ಹೊರಡಿಸಿದೆ. ಇದಲ್ಲದೆ ಕೊರೊನಾ ವೈರಸ್ ಬಾಧಿತರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಅಂತಲೂ ಕಾರ್ಮಿಕ ಇಲಾಖೆ ತಿಳಿಸಿದೆ. ವೈದ್ಯಕೀಯ ಚಿಕಿತ್ಸೆ ಮತ್ತು ರಜೆ ನೀಡಲು ಅನುಸರಿಸಲು 4 ಅಂಶಗಳ ಮಾರ್ಗಸೂಚಿಗಳನ್ನ ಕಾರ್ಮಿಕ ಇಲಾಖೆ ನೀಡಿದೆ.

ಇಎಸ್‍ಐ ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು ತಮ್ಮ ಹತ್ತಿರದ ಇಎಸ್‍ಐ ಔಷಾಧಾಲಯ ಮತ್ತು ಆಸ್ಪತ್ರೆಗಳಿಗೆ ತೆರಳಿ ಸದರಿ ಆಸ್ಪತ್ರೆಗಳಲ್ಲಿನ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಪ್ರಮಾಣ ಪತ್ರ ಪಡೆಯಲು ಬರುವ ಕಾರ್ಮಿಕರಿಗೆ ಎಲ್ಲಾ ಇಎಸ್‍ಐ ವೈದ್ಯಾಧಿಕಾರಿಗಳು ತುರ್ತಾಗಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಬೇಕು. ಕಾರ್ಮಿಕರು ಪ್ರಮಾಣ ಪತ್ರವನ್ನು ಸಂಸ್ಥೆಯ ಆಡಳಿತ ಮಂಡಳಿಗೆ ನೀಡಬೇಕು.

ಪ್ರಮಾಣ ಪತ್ರದ ಮೇಲೆ ಸಂಸ್ಥೆ 28 ದಿನ ಕಡ್ಡಾಯ ರಜೆ ನೀಡಬೇಕು. ಇಎಸ್‍ಐ ಅನ್ವಯವಾಗದೇ ಇರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಕೊರೊನಾ ವೈರಸ್ ಬಾಧಿತರಾದಲ್ಲಿ ಅವರಿಗೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15 ರ ಅನ್ವಯ ತಕ್ಷಣ 28 ದಿನ ವೇತನ ಸಹಿತ ರಜೆ ನೀಡಬೇಕು ಅಂತ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಈ ಎಲ್ಲಾ ಅಂಶಗಳನ್ನ ಆಯಾ ಜಿಲ್ಲಾಧಿಕಾರಿಗಳು ಅನುಷ್ಠಾನ ಮಾಡಲು ಕಾರ್ಮಿಕ ಇಲಾಖೆ ಸೂಚನೆ ನೀಡಿದೆ.

Comments

Leave a Reply

Your email address will not be published. Required fields are marked *