ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿ – 7 ‘ಕೈ’ ಸದಸ್ಯರು ಅಮಾನತು

ನವದೆಹಲಿ: ಲೋಕಸಭಾ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ 7 ಮಂದಿ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ.

ಅನುಚಿತ ವರ್ತನೆ ತೋರಿದ್ದಕ್ಕೆ ಈ ಬಜೆಟ್ ಅವಧಿ ಪೂರ್ಣ ಆಗುವರೆಗೆ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ನಿರ್ಧಾರ ಪ್ರಕಟಿಸಿದ್ದಾರೆ.

ಗೌರವ್ ಗೊಗೊಯ್, ಟಿ.ಎನ್.ಪ್ರಥಾಪನ್, ಡೀನ್ ಕುರಿಯಾಕೋಸ್, ಆರ್ ಉನ್ನಿತಾನ್, ಮಾಣಿಕಮ್ ಟ್ಯಾಗೋರ್, ಬೆನ್ನಿ ಬೆಹ್ನಾನ್ ಮತ್ತು ಗುರ್ಜೀತ್ ಸಿಂಗ್ ಆಜ್ಲಾ ಅವರನ್ನು ಉಳಿದ ಬಜೆಟ್ ಅಧಿವೇಶನಕ್ಕಾಗಿ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.

ಮಂಗಳವಾರ ಕಲಾಪಕ್ಕೆ ಅಡ್ಡಿ ಪಡಿಸುವ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ ಇದೇ ರೀತಿ ಅಡ್ಡಿ ಮಾಡುವುದನ್ನು ಮುಂದುವರಿಸಿದರೆ ಸದಸ್ಯರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದು ಸದನದ ಬಾವಿಗೆ ಇಳಿದು ಪೇಪರ್ ಗಳನ್ನು ಎಸೆದು ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದಕ್ಕೆ ಗರಂ ಆದ ಸ್ಪೀಕರ್ ಈ 7 ಮಂದಿ ಸದಸ್ಯರನ್ನು ಅಮಾನತುಗೊಳಿಸಿದ್ದಾರೆ.

ಇಂದು ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ದೆಹಲಿ ಗಲಾಟೆಯ ಬಗ್ಗೆ ಈಗಲೇ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಷಿ ಮಾರ್ಚ್ 11 ರಂದು ಲೋಕಸಭೆಯಲ್ಲಿ, ಮಾರ್ಚ್ 12 ರಂದು ರಾಜ್ಯ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಇಂದು ಸಹ ಕಲಾಪ ಸರಿಯಾಗಿ ನಡೆಯದೇ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.

Comments

Leave a Reply

Your email address will not be published. Required fields are marked *