ಶಿವಮೊಗ್ಗ: ನಗರದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಎಚ್ಓ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದ್ದಾರೆ.
ಇಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಶಿವಮೊಗ್ಗದಲ್ಲಿ ಒಟ್ಟು 11 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಬರುವ ವಿದೇಶಿ ಪ್ರವಾಸ ಮಾಡಿದವರ ಮೇಲೆ ನಿಗಾ ಇರಿಸಲಾಗಿದ್ದು, ಅದರಲ್ಲಿ ಜನವರಿಯಲ್ಲಿ ಚೀನಾದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಸೇರಿದಂತೆ, 5 ಜನರ ಕುಟುಂಬವೊಂದರ ಮೇಲೂ ನಿಗಾ ಇರಿಸಲಾಗಿದೆ. ಅವರಿಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಈಗಾಗಲೇ ತಿಳಿಸಲಾಗಿದೆ ಎಂದಿದ್ದಾರೆ.

ಈಗಾಗಲೇ ಈ 11 ಜನರಿಗೆ ವಿಮಾನ ನಿಲ್ದಾಣದಲ್ಲಿಯೇ ಸ್ಕ್ರೀನಿಂಗ್ ನಡೆಸಲಾಗಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೂ ನಾಲ್ಕು ವಾರಗಳ ಕಾಲ ನಿಗಾ ಇರಿಸಬೇಕೆಂಬ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇರಿಸಲಾಗಿದ್ದು, ಮನೆ ಬಿಟ್ಟು ಎಲ್ಲಿಯೂ ತೆರಳದಂತೆ ಸೂಚಿಸಲಾಗಿದೆ.
ಜೊತೆಗೆ ಯಾವುದೇ ಸಭೆ ಸಮಾರಂಭ, ಯಾವುದೇ ಪ್ರವಾಸ ಮಾಡದಂತೆ, ಕುಟುಂಬದ ಸದಸ್ಯರ ಜೊತೆ ಬೆರೆಯದಂತೆ ಸೂಚಿಸಲಾಗಿದ್ದು, ಅವರಿಗೆ ವೈರಸ್ ಬಗ್ಗೆ ಜಾಗೃತಿ ನೀಡಲಾಗಿದೆ ಎಂದಿದ್ದಾರೆ. ಇನ್ನು ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ 6 ಬೆಡ್ ಇರುವ ಕೊರೊನಾ ತೀವ್ರ ನಿಗಾ ಘಟಕ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

Leave a Reply