ರಂಗನಾಥಸ್ವಾಮಿ ದೇವಾಲಯದ ಪೂಜೆಗೆ ಅರ್ಚಕರ ಕಿತ್ತಾಟ – ದೇಗುಲಕ್ಕೆ ಬಿತ್ತು ಬೀಗ

ಹಾಸನ: ದೇವಾಲಯದಲ್ಲಿ ಪೂಜೆಗಾಗಿ ಅರ್ಚಕರ ಎರಡು ಗುಂಪಿನ ನಡುವೆ ಕಿತ್ತಾಟವಾಗಿ ದೇವಾಲಯಕ್ಕೆ ಬೀಗ ಹಾಕಿರುವ ಘಟನೆ ಹಾಸನದಲ್ಲಿ ನಡೆದಿದೆ.

ಅರಕಲಗೂಡು ತಾಲೂಕಿನ ಹರದೂರುಪುರ ಗ್ರಾಮದಲ್ಲಿ ರಂಗನಾಥಸ್ವಾಮಿ ದೇವಾಲಯವಿದೆ. ಈ ದೇವಾಲಯ ಪುರಾತನದ ಚೋಳರ ಕಾಲಕ್ಕೆ ಸೇರಿದ್ದಾಗಿದ್ದು, ದೇವಾಲಯದಲ್ಲಿ ಪೂಜೆಗಾಗಿ ಇಬ್ಬರು ಅರ್ಚಕರ ಗುಂಪಿನ ಕಿತ್ತಾಟದಿಂದ ಒಂದು ಗುಂಪು ಹೈಕೋರ್ಟ್ ಮೆಟ್ಟಿಲೇರಿದೆ.

ಮೂವರು ಅರ್ಚಕರ ಒಂದು ಗುಂಪು ಮತ್ತು 24 ಮಂದಿ ಅರ್ಚಕರ ಮತ್ತೊಂದು ಗುಂಪಿನ ನಡುವೆ ಪೂಜೆಗಾಗಿ ಕಿತ್ತಾಟ ನಡೆದಿದೆ. ರಾಮಸ್ವಾಮಿ, ಧರ್ಮರಾಜ್, ಚಿನ್ನಸ್ವಾಮಿ ಎಂಬ ಅರ್ಚಕರ ಒಂದು ಗುಂಪು ಮತ್ತು ರಂಗನಾಥ್, ಗೋವಿಂದಯ್ಯ ಸೇರಿ 24 ಮಂದಿಯ ಮತ್ತೊಂದು ಗುಂಪಿನ ನಡುವೆ ಗಲಾಟೆ ಶುರುವಾಗಿದೆ. ಡಿಸಿ ಕೋರ್ಟ್ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎರಡೂ ನ್ಯಾಯಾಲಯದಲ್ಲಿ ರಾಮಸ್ವಾಮಿ, ಧರ್ಮರಾಜ್, ಚಿನ್ನಸ್ವಾಮಿ ಪರ ಆದೇಶವಾಗಿದೆ. ಕೋರ್ಟ್ ಆದೇಶವಿದ್ದರೂ ರಂಗನಾಥ್ ಅವರ ಗುಂಪು ಅಧಿಕಾರಿಗಳ ಮುಂದೆಯೇ ದೇವಾಲಯದ ಬೀಗ ನೀಡದೆ ಗಲಾಟೆ ಮಾಡಿದೆ.

7 ಫೆಬ್ರವರಿ 2019 ರಂದು ಡಿಸಿ ಮತ್ತು ಹಿಂದೂ ಧಾರ್ಮಿಕ ಇಲಾಖೆ ನ್ಯಾಯಾಲಯದಲ್ಲಿ ರಾಮಸ್ವಾಮಿ ಗುಂಪಿನ ಪರ ಆದೇಶವಾಗಿದೆ. ಈ ಆದೇಶ ಪ್ರಶ್ನಿಸಿ ರಂಗನಾಥ್ ಅವರ 24 ಮಂದಿಯ ಅರ್ಚಕರ ಗುಂಪು ಹೈಕೋರ್ಟ್ ಮೆಟ್ಟಿಲೇರಿದೆ. ಈ ದೇವಾಲಯದ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ವಿಶೇಷ ಭಕ್ತಿಯಿದೆ. ಅಷ್ಟೇ ಅಲ್ಲದೇ ಈಗಾಗಲೇ ಸರ್ಕಾರದಿಂದ ದೇವಾಲಯದ ಬಳಿ ಅಭಿವೃದ್ಧಿಗಾಗಿ ಸುಮಾರು 10 ಕೋಟಿ ರೂಪಾಯಿಯ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಆದ್ದರಿಂದ ಆದಷ್ಟು ಬೇಗ ದೇವಾಲಯದ ಪೂಜೆ ವಿವಾದ ಬಗೆಹರಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *