– ಚೀನಾಕ್ಕೆ ಹೋಗಿ ಬಂದಿರುವ ಇಬ್ಬರು ಯುವಕರು
ಮಡಿಕೇರಿ: ಚೀನಾದಲ್ಲಿ ಮರಣ ಮೃದಂಗ ಬಾರಿಸಿ ಕರ್ನಾಟಕಕ್ಕೂ ಎಂಟ್ರಿ ಕೊಟ್ಟಿರುವ ಕೊರೊನಾ ವೈರಸ್ ಕೊಡಗಿನಲ್ಲೂ ಆತಂಕ ಸೃಷ್ಟಿಸಿದೆ.
ಚೀನಾಕ್ಕೆ ಹೋಗಿ ಬಂದಿರುವ ಇಬ್ಬರು ಯುವಕರು ಕೊಡಗಿನಲ್ಲಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, 20 ದಿನಗಳ ಹಿಂದೆ ಈ ಇಬ್ಬರು ಚೀನಾದಿಂದ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಿದೆ.

ಮಂಜಿನ ನಗರಿ ಮಡಿಕೇರಿಯಲ್ಲೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಭಿತ್ತಿ ಪತ್ರ ಹಂಚುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಕೊಡಗು ಪ್ರವಾಸೋದ್ಯಮ ತಾಣವಾದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಕೊವೀಡ್-19 ವೈರಸ್ ಬಗ್ಗೆ ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ವೈರಸ್ ಲಕ್ಷಣಗಳು ಹಾಗೂ ಅದು ಹರಡುವ ವಿಧಾನ, ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಚಿಕಿತ್ಸೆ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯ ಗಡಿ ಭಾಗಗಳಾದ ಕುಟ್ಟ-ಮಾಕುಟ್ಟಾ ಹಾಗೆಯೇ ಕರಿಕೆ ವ್ಯಾಪ್ತಿಯಲ್ಲಿ ವಿದೇಶಗಳಿಂದ ಆಗಮಿಸಿದವರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಜ್ವರ, ಶೀತ, ಕೆಮ್ಮು ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳುವಂತೆ ಮಾಹಿತಿ ನೀಡಿದ್ದೇವೆ. ಚೀನಾದಿಂದ ಇಬ್ಬರು ವಾಪಸ್ಸಾಗಿದ್ದು, ಅವರಿಗೆ ಯಾವುದೇ ವೈರಸ್ ಲಕ್ಷಣಗಳು ವ್ಯಕ್ತವಾಗಿಲ್ಲ. 28 ದಿನಗಳ ಕಾಲ ಅವರ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಅರೋಗ್ಯ ಇಲಾಖೆ ಡಿಎಚ್‍ಓ ಮೋಹನ್ ಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಕೊರೊನಾ ವೈರಸ್ ಕಂಡು ಬಂದಲ್ಲಿ ಜಿಲ್ಲಾ ಆಸ್ಪತ್ರೆಯಿಂದ 5 ಹಾಗೆಯೇ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡೆರಡು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಚಿಕಿತ್ಸೆಗೆ ಅಗತ್ಯ ಮಾಸ್ಕ್, ಗೌನ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಜಿಲ್ಲೆಯ ಜನತೆ ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದರು.

Leave a Reply