ಅಪ್ಪನಿಗೆ ಕೊರೊನಾ – ಮಗನ ಶಾಲೆಗೆ ಬೀಗ

ನೊಯ್ಡಾ: ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಪತ್ತೆಯಾದ ಬೆನ್ನಲ್ಲೇ ನೊಯ್ಡಾದ ಹೆಸರಾಂತ ಶಾಲೆಗೆ ಬೀಗ ಜಡಿಯಲಾಗಿದೆ.

ಶಾಲೆಯ 6ನೇ ತರಗತಿ ಬಾಲಕನ ತಂದೆಗೆ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿದೆ. ಹೀಗೆ ಮತ್ತೊಂದು ಶಾಲೆಯನ್ನು ಕೂಡ ಬುಧವಾರದಿಂದ ಮಾರ್ಚ್ 11ರವರೆಗೆ ಮುಂಜಾಗ್ರತಾ ಕ್ರಮವಾಗಿ ಮುಚ್ಚಲು ನಿರ್ಧಾರ ಮಾಡಲಾಗಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಎರಡೂ ಶಾಲೆಗಳಿಗೆ ಭೇಟಿ ನೀಡಿ ಇಬ್ಬರು ವಿದ್ಯಾರ್ಥಿಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ವೈದ್ಯಕೀಯ ಅಧಿಕಾರಿಗಳ ತಂಡ ಶಾಲೆಯ ಸುತ್ತಮುತ್ತ ನಿಗಾವಹಿಸಿದ್ದಾರೆ. ಅಲ್ಲದೆ ಬಾಲಕನ ಕುಟುಂಬದ ಸದಸ್ಯರು ಹೊರಗಡೆ ಬಾರದಂತೆ ನಿರ್ಬಂಧ ಹೇರಲಾಗಿದೆ.

ವೈದ್ಯಕೀಯ ಮುಖ್ಯ ಅಧಿಕಾರಿಯೊಬ್ಬರು ಶಾಲೆಗೆ ಭೇಟಿ ನೀಡಿ ಶಾಲೆಯನ್ನು ಕೆಲ ದಿನಗಳ ಮುಚ್ಚುವಂತೆ ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಗಾಬರಿಯಾಗಬೇಕಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟರುಗಳಾದ ಗೌತಮ್‍ಬುದ್ ಹಾಗೂ ಬಿಎನ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?

ಕೊರೊನಾ ಸೋಂಕಿತ ವ್ಯಕ್ತಿಯ ಕುಟುಂಬವು ತನ್ನ ಇಬ್ಬರು ಮಕ್ಕಳನ್ನು ಒಂದೇ ಶಾಲೆಗೆ ಕಳುಹಿಸುತ್ತಿದೆ. ಅಲ್ಲದೆ ಇಬ್ಬರಲ್ಲಿ ಒಬ್ಬನ ಹುಟ್ಟುಹಬ್ಬವಿದ್ದ ಕಾರಣ ದೆಹಲಿ ಹೊಟೇಲೊಂದರಲ್ಲಿ ಕುಟುಂಬ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದೆ. ಈ ಕಾರ್ಯಕ್ರಮಕ್ಕೆ ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ಕೂಡ ತಮ್ಮ ಕುಟುಂಬಸ್ಥರ ಜೊತೆ ಪಾಲ್ಗೊಂಡಿದ್ದರು. ಹೀಗಾಗಿ ಈ ಎಲ್ಲ ಮಕ್ಕಳು ಹೋಗುವ ಶಾಲೆಗಳಿಗೆ ಇದೀಗ ಬೀಗ ಜಡಿಯಲಾಗಿದೆ.

ಸೆಕ್ಟರ್ 135ರಲ್ಲಿ ಇರುವ ಈ ಶಾಲೆಗೆ ಮೂರು ದಿನಗಳ ಕಾಲ ಬೀಗ ಹಾಕಲಾಗಿದೆ. ಯಾಕಂದ್ರೆ ಉಳಿದ ಮಕ್ಕಳಿಗೆ ಸೋಂಕು ತಗುಲಬಾರದೆಂಬ ಮುಂಜಾಗ್ರತಾ ಕ್ರಮದಿಂದಾಗಿ ಈ ನಿರ್ಧಾರ ಮಾಡಲಾಗಿದೆ. ನೊಯ್ಡಾದ 168 ಸೆಕ್ಟರ್ ನಲ್ಲಿ ಮತ್ತೊಂದು ಶಾಲೆಯಿದ್ದು, ಅದಕ್ಕೂ ಶೀಘ್ರವೇ ಬೀಗ ಜಡಿಯಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಮಾರ್ಚ್ 2 ರಂದು ದೆಹಲಿಯಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಸೋಂಕು ಇರುವ ಬಗ್ಗೆ ಪತ್ತೆಯಾಗಿದೆ. ಸೋಂಕು ತಗುಲಿರುವ ವ್ಯಕ್ತಿ ದೆಹಲಿಯಿಂದ ಇಟಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ವ್ಯಕ್ತಿ ಪರೀಕ್ಷೆಗೆ ಒಳಪಟ್ಟಾಗ ಸೋಂಕು ಇರುವ ಬಗ್ಗೆ ಪತ್ತೆಯಾಗಿತ್ತು.

ಹಾಗೆಯೇ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಕುಟುಂಬಸ್ಥರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಅವರಿಗೂ ಕೊರೊನಾದ ಕೆಲವೊಂದು ಲಕ್ಷಣಗಳು ಕಂಡುಬಂದಿದ್ದರಿಂದ ಅವರನ್ನು ಕೂಡ ಸಫರ್‍ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂಬುದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *