ಕಾಂಗ್ರೆಸ್ ವಿಶಾಲ ಹೃದಯ ಬೆಳೆಸಿಕೊಳ್ಳಲಿ: ಸಿದ್ದರಾಮಯ್ಯ ಪರ ಕರಂದ್ಲಾಜೆ ಬ್ಯಾಟಿಂಗ್

– ಬಿಎಸ್‍ವೈ ಹುಟ್ಟುಹಬ್ಬದಲ್ಲಿ ಹೆಚ್‍ಡಿಕೆ ಪಾಲ್ಗೊಳ್ಳಬೇಕಿತ್ತು

ಉಡುಪಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡ ವಿಚಾರ ದೊಡ್ಡದು ಮಾಡದೆ ವಿಶಾಲ ಹೃದಯ ಬೆಳೆಸಿಕೊಳ್ಳಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರ ಹುಟ್ಟುಹಬ್ಬ ಪಕ್ಷಾತೀತ ಕಾರ್ಯಕ್ರಮ. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಕ್ಷದ ಚಿಹ್ನೆ ಇರಲಿಲ್ಲ. ಕಾಂಗ್ರೆಸ್ಸಿನವರಿಗೆ ಯಾಕೆ ಗೊಂದಲ ಇದೆಯೋ ಗೊತ್ತಿಲ್ಲ ಎಂದರು.

ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿಯಲ್ಲ. ಬಿಎಸ್‍ವೈ ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿ ಅಂದ್ರೆ ಎಲ್ಲರಿಗೂ ಸಂಬಂಧಪಟ್ಟವರು. ಅವರ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಯಡಿಯೂರಪ್ಪ ಚೇಂಬರ್ ಗೆ ಯಾವ ಪಕ್ಷದವರು ಬೇಕಾದರೂ ಬರಬಹುದು. ಕಾಂಗ್ರೆಸ್ಸಿಗರು ಇದನ್ನು ವಿಶಾಲವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೂಡ ಯಡಿಯೂರಪ್ಪನವರು ಕರೆದಿರಬಹುದು. ಕುಮಾರಸ್ವಾಮಿ ಭಾಗಿಯಾಗಿದ್ದರೆ ಯಾವ ಗೊಂದಲವೂ ಇರುತ್ತಿರಲಿಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ನಡುವಿನ ವಿರೋಧಾಭಾಸ ಕಡಿಮೆಯಾಗುತ್ತಿತ್ತು ಎಂದು ಹೇಳಿದರು.

Comments

Leave a Reply

Your email address will not be published. Required fields are marked *