ರಾಜಾಹುಲಿ ಬರ್ತ್ ಡೇಗೆ ಟಗರು ಆಗಮನ – ಕೈಹಿಡಿದು ಕರೆದೊಯ್ದ ಸಿಎಂ

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿ, ಶುಭ ಕೋರಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ಬಳಿಕ ವೇದಿಕೆಯ ಮುಂದೆ ಅಕ್ಕಪಕ್ಕದಲ್ಲಿ ಕುಳಿತಿದ್ದರು. ಈ ವೇಳೆ ಸಿಎಂ ಯಡಿಯೂರಪ್ಪ ಅವರಿಗೆ ಶುಭ ಕೋರಿ, ಸಿದ್ದರಾಮಯ್ಯ ಅವರನ್ನು ಮಾತನಾಡಿಸಿದರು.

ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಪ್ರೀತಿಯ ಯಡಿಯೂರಪ್ಪ ಅವರಿಗೆ 77ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ರಾಜಕೀಯ ಹೋರಾಟವನ್ನೇ ಬದುಕಿನ ಮಾರ್ಗವನ್ನಾಗಿ ಮಾಡಿಕೊಂಡು ಯಶಸ್ಸನ್ನು ಸಾಧಿಸಿದ ನಿಮಗೆ, ಇನ್ನಷ್ಟು ಕಾಲ ಪಕ್ಷಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಒದಗಿ ಬರಲಿ, ಜೊತೆಗೆ ಆಯುರಾರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಆಶಿಸುವೆ ಎಂದು ತಿಳಿಸಿದ್ದರು.

ಸಿಎಂ ಯಡಿಯೂರಪ್ಪ ಅವರು ತಮ್ಮ ಹುಟ್ಟುಹಬ್ಬವಾದ ಇಂದೇ ಅದೃಷ್ಟದ ಮನೆಗೆ ಕಾಲಿಡುತ್ತಿದ್ದಾರೆ. ಸರ್ಕಾರಿ ಬಂಗಲೆ ತಮ್ಮ ಅದೃಷ್ಟದ ಕಾವೇರಿ ನಿವಾಸಕ್ಕೆ ಯಡಿಯೂರಪ್ಪ ಅವರು ಪೂಜೆ ಮಾಡಿದ್ದಾರೆ. ಇಂದು ಮುಂಜಾನೆಯೇ ಬಿಎಸ್‍ವೈ ಅವರು ತಮ್ಮ ಅದೃಷ್ಟದ ಮನೆಗೆ ಎಂಟ್ರಿ ಕೊಟ್ಟಿದ್ದು, ಗೃಹ ಪ್ರವೇಶ ಪೂಜೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದರು ಕಾವೇರಿ ನಿವಾಸದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಾಸವಿದ್ದರು. ಸಿದ್ದರಾಮಯ್ಯರ ಮನೆ ಖಾಲಿ ಮಾಡಿದ್ದು, ಇಂದು ಬಿಎಸ್ ವೈ ಕಾವೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಕಿ ಮನೆ ಎಂದು ಬಿಎಸ್‍ವೈ ಖುಷಿಖುಷಿಯಾಗಿ ಗೃಹ ಪ್ರವೇಶ ಪೂಜೆ ಮಾಡಿದ್ದರು.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಸಂಜೆ ಅರಮನೆ ಮೈದಾನದ ವೈಟ್‍ಪೆಟಲ್ಸ್ ಸಭಾಂಗಣದಲ್ಲಿ ಸಿಎಂಗೆ ಅಭಿನಂದನಾ ಸಮಾರಂಭ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಬಿಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿ.ಎಲ್.ಸಂತೋಷ ಸೇರಿದಂತೆ ಹಲವಾರು ಗಣ್ಯರು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಿನ್ನೆಯೇ ಟ್ವೀಟ್ ಮಾಡಿದ್ದ ಸಿಎಂ, ಯಾರೂ ಕೂಡ ಹಾರ-ತುರಾಯಿ, ಕಾಣಿಕೆಗಳನ್ನು ತರಬಾರದು ಎಂದು ಆಪ್ತೇಷ್ಠರಿಗೆ ಟ್ವಿಟ್ಟರ್ ಮೂಲಕ ಸಿಎಂ ಮನವಿ ಮಾಡಿ, ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ ಎಂದು ಅಭಿಮಾನಿಗಳಿಗೆ ಹೇಳಿದ್ದರು.

Comments

Leave a Reply

Your email address will not be published. Required fields are marked *