ರಾಯಚೂರಿನ ಗ್ರಾನೈಟ್ ಉದ್ಯಮದ ಮೇಲೆ ಕೊರೊನಾ ವೈರಸ್ ಕರಿನೆರಳು

– ಪ್ರತಿ ತಿಂಗಳು ಗಣಿ ಕಂಪನಿಗಳಿಗೆ 5 ಕೋಟಿ ರೂ. ನಷ್ಟ
– ಬೀದಿಗೆ ಬಿದ್ದ 2,500 ಕ್ಕೂ ಹೆಚ್ಚು ಕಾರ್ಮಿಕರು

ರಾಯಚೂರು: ಕೊರೊನಾ ವೈರಸ್ ನಿಂದ ಚೀನಾ ದೇಶದಲ್ಲಿ ಸಾವಿನ ಸರಣಿ ನಿರಂತರ ಸಾಗಿದೆ. ಇದರಿಂದ ಇಡೀ ದೇಶವೇ ಅಲ್ಲೋಲ ಕಲ್ಲೋಲವಾಗಿದೆ. ವ್ಯಾಪಾರ ವಹಿವಾಟುಗಳು ಸಂಪೂರ್ಣ ಬಿದ್ದುಹೋಗಿವೆ. ಇದರ ನೇರ ಎಫೆಕ್ಟ್ ರಾಯಚೂರು ಜಿಲ್ಲೆಯ ಗ್ರಾನೈಟ್ ಉದ್ಯಮಕ್ಕೆ ಆಗಿದೆ.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‍ಗೆ ಕೊರೊನಾ ನೇರ ಎಫೆಕ್ಟ್ ತಟ್ಟಿದ್ದು, ಚೀನಾದಲ್ಲಿ ಭಾರೀ ಬೇಡಿಕೆಯಿದ್ದ ಮುದಗಲ್ ಗ್ರಾನೈಟ್‍ನ್ನು ಈಗ ಕೇಳುವವರೇ ಇಲ್ಲದಂತಾಗಿದೆ. ಪ್ರತಿ ತಿಂಗಳು ಕನಿಷ್ಠ ಐದು ಕೋಟಿ ರೂ. ವ್ಯವಹಾರ ಮಾಡುತ್ತಿದ್ದ ಇಲ್ಲಿನ 8 ಗಣಿ ಕಂಪನಿಗಳು ಬಾಗಿಲು ಮುಚ್ಚುವ ಕೊನೆ ಹಂತದಲ್ಲಿವೆ. ಕೆಲಸವೇ ಇಲ್ಲದೆ ಪ್ರತಿ ಕಂಪನಿ ತಿಂಗಳಿಗೆ 30 ಲಕ್ಷ ರೂ.ಗೂ ಹೆಚ್ಚು ನಷ್ಟ ಅನುಭವಿಸುತ್ತಿವೆ. ಈ ಭಾಗದ ಮುದಗಲ್ ಗ್ರೇ ಅಥವಾ ಎಂಡಿ 5, ಹಾಗೂ ಆದಾಪುರ ಭಾಗದ ಕ್ಯಾಟ್ ಐ ಎಂಬ ಉತ್ಕೃಷ್ಟ ಗ್ರಾನೈಟ್ ಚೀನಾ, ಥೈವಾನ್ ಹಾಗೂ ಜಪಾನಿಗೆ ಹೆಚ್ಚು ರಫ್ತಾಗುತ್ತಿತ್ತು. ಶೇಕಡಾ 90 ರಷ್ಟು ಖರೀದಿಸುತ್ತಿದ್ದ ಚೀನಿಯರು ಈಗ ಖರೀದಿ ಮಾಡುತ್ತಿಲ್ಲ.

ಎರಡು ತಿಂಗಳಿನಿಂದ ಗ್ರಾನೈಟ್ ಹಾಗೇ ಉಳಿದಿದ್ದು ಉದ್ಯಮ ಸ್ಥಗಿತಗೊಂಡಿದೆ. ಇಲ್ಲಿನ ಗ್ರಾನೈಟ್ ಗೆ ಸ್ಥಳೀಯವಾಗಿ ಮಾರುಕಟ್ಟೆಯಿಲ್ಲ ಅಲ್ಲದೆ ರಾಜಸ್ವ ಕೂಡ ಮಾಲೀಕರಿಗೆ ದೊಡ್ಡ ಹೊರೆಯಾಗಿದೆ. ಪ್ರತಿ ಚದರ ಮೀಟರ್ ಗೆ ಸುಮಾರು 11,231 ರೂ.ಯಂತೆ ಚೀನಾಗೆ ರಫ್ತಾಗುತ್ತಿದ್ದ ಕಚ್ಚಾ ಗ್ರಾನೈಟ್ ಪ್ರತಿ ಕ್ವಾರೆಯಲ್ಲೂ 400 ಚ.ಮೀಗೂ ಅಧಿಕ ಪ್ರಮಾಣದಲ್ಲಿ ಹಾಗೇ ಉಳಿದಿದೆ. ಸ್ಥಳೀಯವಾಗಿ ಪಾಲಿಶ್ ಆಗದ ಹಿನ್ನೆಲೆ ದೊಡ್ಡ ನಷ್ಟ ಉಂಟಾಗುತ್ತಿದೆ ಎಂದು ನೋಬಲ್ ಗ್ರಾನೈಟ್ಸ್ ಗಣಿ ಮಾಲೀಕ ದಾವುದ್ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿ ಗಣಿಯಲ್ಲೂ 300 ರಿಂದ 400 ಜನ ಕಾರ್ಮಿಕರು ದುಡಿಯುತ್ತಿದ್ದರು. ಆದರೆ ಈಗ ಎರಡು ತಿಂಗಳಿನಿಂದ ಗಣಿ ಬಂದ್ ಆಗಿದ್ದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಈಗಾಗಲೇ ಹಲವು ಕಾರ್ಮಿಕರನ್ನು ಕೆಲಸದಿಂದ ಬಿಡಿಸಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡು ಗುಳೆ ಹೋಗುವಂಥ ಸ್ಥಿತಿ ಇದೆ. ಒಂದು ಗಣಿ ನಿರ್ವಹಣೆಗೆ ಮಾಲೀಕರಿಗೆ ತಿಂಗಳಿಗೆ ಕನಿಷ್ಠ 30 ಲಕ್ಷ ರೂ. ಬೇಕಾಗುತ್ತದೆ. ಆದರೆ ವ್ಯಾಪಾರವೇ ಇಲ್ಲದಿರುವುದರಿಂದ ಸುಮಾರು 2,500 ಜನ ಕೆಲಸಗಾರರು ನಿರುದ್ಯೋಗಿಗಳಾಗುತ್ತಿದ್ದಾರೆ.

ಇಲ್ಲಿಯ ಗ್ರಾನೈಟ್ ಉದ್ಯಮ ಉಳಿಯಬೇಕಾದರೆ ಗಣಿ ಮೇಲೆ ಹಾಕುತ್ತಿರುವ ರಾಜಸ್ವ ಧನ ಕಡಿಮೆ ಮಾಡಬೇಕು. ಸ್ಥಳೀಯವಾಗಿಯೂ ಪಾಲಿಶ್ ಆಗುವಂತೆ ಪಾಲಿಶ್ ಕಾರ್ಖಾನೆಯ ತೆರಿಗೆ ಕಡಿಮೆ ಮಾಡಬೇಕೆಂದು ಗಣಿ ಮಾಲೀಕರು ಆಗ್ರಹಿಸಿದ್ದಾರೆ. ಕೊರೊನಾ ವೈರಸ್ ನಿಂದಾಗಿ ಬಹಳ ದಿನಗಳವರೆಗೆ ಚೀನಾ ವ್ಯಾಪಾರಿಗಳು ಖರೀದಿಗೆ ಬಾರದಿದ್ದರೆ ಗಣಿಗಳನ್ನ ಶಾಶ್ವತವಾಗಿ ಮುಚ್ಚಬೇಕಾದ ಸ್ಥಿತಿಯಿದೆ.

Comments

Leave a Reply

Your email address will not be published. Required fields are marked *