ದೆಹಲಿ ಗಲಭೆ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ: ಕಟೀಲ್

ಚಿಕ್ಕೋಡಿ(ಬೆಳಗಾವಿ): ದೆಹಲಿ ಗಲಭೆ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶಕ್ಕೆ ಬೆಂಕಿ ಹಾಕಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗಲೆಲ್ಲ ದೇಶದಲ್ಲಿ ಗಲಭೆ ಸೃಷ್ಟಿ ಮಾಡಿದೆ. ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವದ ಕೊಲೆ ಮಾಡುತ್ತದೆ ಎಂದು ಕಿಡಿಕಾರಿದರು.

ಅಲ್ಲದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಘನಘೋರ ಹತ್ಯಾಕಾಂಡಗಳನ್ನು ನಾವು ಕಂಡಿದ್ದೇವೆ. ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಹಲವು ಕಾಲ ಘಟ್ಟಗಳನ್ನು ನೆನೆಪಿಸಿಕೊಂಡು ಕಾಂಗ್ರೆಸ್ ಮುಖಂಡರು ಮಾತನಾಡಬೇಕು. ದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಬಂದ ಮೇಲೇನೆ ಯಾಕೆ ಗಲಭೆಗಳು ಆರಂಭವಾದವು ಎಂದರೆ ದೇಶಕ್ಕೆ, ಪ್ರಧಾನಿ ಮೋದಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಕಳಂಕ ತರುವ ಇಚ್ಛೆ ಕಾಂಗ್ರೆಸ್ ಪಕ್ಷಕ್ಕಿದೆ. ಇಲ್ಲವಾದರೆ ಹುಡುಗರ ಕೈಯಲ್ಲಿ ಪಿಸ್ತೂಲು, ಆಯುಧಗಳು ಎಲ್ಲಿಂದ ಬರುತ್ತವೆ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಉಮೇಶ್ ಕತ್ತಿ ಅವರಿಗೆ ದೂರವಾಣಿ ಕರೆ ಮಾಡಿ ಎಚ್ಚರಿಕೆ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ಜಾರಿಕೊಂಡರು.

Comments

Leave a Reply

Your email address will not be published. Required fields are marked *