ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಂ.1 ಪಟ್ಟದಿಂದ ಕೆಳಗಿಳಿದ ವಿರಾಟ್

– 8ನೇ ಬಾರಿಗೆ ಅಗ್ರಸ್ಥಾನಕ್ಕೇರಿದ ಸ್ಮಿತ್
– ಟಾಪ್ 10 ಬೌಲರ್‌ಗಳಲ್ಲಿ ಭಾರತದ ಅಶ್ವಿನ್‍ಗೆ ಮಾತ್ರ ಸ್ಥಾನ

ದುಬೈ: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಮತ್ತೆ ಹಿಂದಿಕ್ಕಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‍ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ.

ವೆಲ್ಲಿಂಗ್ಟನ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ, 5 ಪಾಯಿಂಟ್‍ಗಳನ್ನು ಕಳೆದುಕೊಂಡಿದ್ದಾರೆ. ವಿರಾಟ್ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 2 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 43 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ಇದನ್ನೂ ಓದಿ: 91 ದಿನದಲ್ಲಿ 19 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕ ಸಿಡಿಸದ ವಿರಾಟ್

ವಿರಾಟ್ ಕೊಹ್ಲಿ 906 ಅಂಕಗಳೊಂದಿಗೆ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‍ಗಳ ಶ್ರೇಯಾಂಕದಲ್ಲಿ ಈಗ 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಟೀವ್ ಸ್ಮಿತ್ 5 ಅಂಕಗಳಿಂದ ಮುನ್ನಡೆಸಿದ್ದಾರೆ. ಈ ಮೂಲಕ ಸ್ಟೀವ್ ಸ್ಮಿತ್ ತಮ್ಮ ವೃತ್ತಿ ಬದುಕಿನಲ್ಲಿ 8ನೇ ಬಾರಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‍ ಶ್ರೇಯಾಂಕದಲ್ಲಿ ನಂ.1 ಬ್ಯಾಟ್ಸ್‌ಮನ್‍ ಆಗಿ ಹೊರಹೊಮ್ಮಿದ್ದಾರೆ. ಸ್ಟೀವ್ ಸ್ಮಿತ್ 2015ರ ಜೂನ್‍ನಲ್ಲಿ ಮೊದಲ ಬಾರಿ ನಂ.1 ಸ್ಥಾನ ಪಡೆದಿದ್ದರು.

ಕೊಹ್ಲಿ ಹೊರತುಪಡಿಸಿ, ಅಜಿಂಕ್ಯ ರಹಾನೆ 8ನೇ ಸ್ಥಾನ (760 ಅಂಕ), ಚೇತೇಶ್ವರ ಪೂಜಾರ 9ನೇ ಸ್ಥಾನ (757 ಅಂಕ) ಮತ್ತು ಮಾಯಾಂಕ್ ಅಗರ್ವಾಲ್ 10ನೇ ಸ್ಥಾನ (727) ಪಡೆದಿದ್ದಾರೆ.

ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯಾದ ಬ್ಯಾಟಿಂಗ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಮರಳಿದ್ದಾರೆ. ಅವರು 853 ಅಂಕ ಪಡೆದುಕೊಂಡಿದ್ದಾರೆ. ಭಾರತ ಅನುಭವಿ ಬ್ಯಾಟ್ಸ್‌ಮನ್‍ ಚೇತೇಶ್ವರ್ ಪೂಜಾರ ಎರಡೂ ಇನ್ನಿಂಗ್ಸ್ ಗಳಲ್ಲಿ 11 ರನ್ ಗಳಿಸಿ ವೈಫಲ್ಯ ತೋರಿದರು. ಪರಿಣಾಮ 2 ಸ್ಥಾನಗಳನ್ನು ಕಳೆದುಕೊಂಡು 9ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತದ ವೇಗಿಗಳಾದ ಜಸ್‍ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಟಾಪ್ 10 ಶ್ರೇಯಾಂಕಿತ ಬೌಲರ್‌ಗಳಿಂದ ಹೊರ ಬಿದ್ದಿದ್ದಾರೆ. ಸ್ಪಿನ್ನರ್ ಆರ್.ಅಶ್ವಿನ್ ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಅಶ್ವಿನ್ 765 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್‍ನ ಅನುಭವಿ ವೇಗಿ ಟಿಮ್ ಸೌಥಿ ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಎಂಟು ಸ್ಥಾನಗಳ ಜಿಗಿತ ಕಂಡಿದ್ದಾರೆ. ಅವರು ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 110 ರನ್ ನೀಡಿ, 9 ವಿಕೆಟ್ ಪಡೆದುಕೊಂಡಿದ್ದರು.

ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್‍ಗಳ ವೈಫಲ್ಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿಯೂ 200ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ಭಾರತವು 10 ವಿಕೆಟ್‍ಗಳಿಂದ ಹೀನಾಯ ಸೋಲು ಕಂಡಿತ್ತು.

Comments

Leave a Reply

Your email address will not be published. Required fields are marked *