ಮನೆಗೆ ನುಗ್ಗಿ ಗೃಹಿಣಿಯನ್ನ ಅಪಹರಿಸಿದ ಡೆಡ್ಲಿ ಗ್ಯಾಂಗ್

-ರಕ್ಷಣೆಗೆ ಮುಂದಾದ ಪತಿಯ ಮೇಲೆ ಹಲ್ಲೆ
-ಅನುಮಾನಗಳಿಗೆ ಕಾರಣವಾಯ್ತು ಪೊಲೀಸರ ನಡೆ

ಬೆಂಗಳೂರು: ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡುವ ಹೊಸ ಗ್ಯಾಂಗ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ನೀರು ಕೇಳುವ ನೆಪದಲ್ಲಿ ಮನೆಯ ಡೋರ್ ಬಡಿದು ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡುತ್ತಾರೆ. ಬೆಂಗಳೂರಿಗೆ ಕಾಲಿಟ್ಟಿರುವ ಈ ಖತರ್ನಾಕ್ ಗ್ಯಾಂಗ್‍ನ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಖತರ್ನಾಕ್ ಗ್ಯಾಂಗ್ ಮೊದಲೇ ಟಾರ್ಗೆಟ್ ಮಾಡಿಕೊಂಡು ಮನೆಗೆ ನುಗ್ಗಿ ಇಬ್ಬರು ಮಕ್ಕಳ ತಾಯಿಯನ್ನು ಕಿಡ್ನಾಪ್ ಮಾಡಿದೆ. ಈ ಘಟನೆಯಿಂದ ಬೆಂಗಳೂರಿನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕಿಡ್ನಾಪ್ ಸ್ಟೋರಿಯನ್ನು ಪಬ್ಲಿಕ್ ಟಿವಿ ತಂಡ ಬೆನ್ನತ್ತಿದಾಗ ಕಿಡ್ನಾಪ್‍ಗೆ ಬಳಿಸಿದ ಟೀಂ, ಓಮ್ನಿ ವ್ಯಾನ್‍ನ ಸ್ಫೋಟಕ ವಿಡಿಯೋ ಕಲೆ ಹಾಕಿದೆ.

ಫೆಬ್ರವರಿ 10ರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಅಪರಿಚಿತರು ಓಮ್ನಿ ವ್ಯಾನ್ ಮೂಲಕ ಈ ಮಹಿಳೆಯನ್ನು ಕಿಡ್ನಾಪ್ ಮಾಡಿದ್ದಾರೆ. ನಾಪತ್ತೆಯಾದ ಮಹಿಳೆಯ ಹೆಸರು ಅನಿತಾವಾಗಿದ್ದು, ಯಲಹಂಕದ ಬೇಸ್ತರ ಬೀದಿಯ ನಿವಾಸಿ. ಫಿಲ್ಮಿ ಸ್ಟೈಲಲ್ಲಿ ಅಂದು ರಾತ್ರಿ ಅನಿತಾರನ್ನು ಆರು ಜನರ ತಂಡ ಕಿಡ್ನಾಪ್ ಮಾಡಿತ್ತು. ಈ ವೇಳೆ ಪತ್ನಿಯ ರಕ್ಷಣೆಗೆ ಹೋದ ಮಾದೇಶ್ ಮೇಲೆ ಡೆಡ್ಲಿ ಗ್ಯಾಂಗ್ ಹಲ್ಲೆ ನಡೆಸಿದೆ.

ಕಿಡ್ನಾಪ್ ಮಾಡಿದ ಗ್ಯಾಂಗ್‍ನಿಂದಲೇ ಒಬ್ಬ, 30 ಸಾವಿರ ಹಣ ಕೊಟ್ಟರೆ ನಿಮ್ಮ ಮಗಳನ್ನು ಬಿಟ್ಟು ಬಿಡುತ್ತೀವಿ ಎಂದು ಅನಿತಾ ತಂದೆಗೆ ಕರೆ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಅನಿತಾ ಪತಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕರೆಯ ಜಾಡು ಹಿಡಿದು ಫೀಲ್ಡ್‍ಗಿಳಿದ ಯಲಹಂಕ ಪೊಲೀಸರಿಗೆ ಕಿಡ್ನಾಪರ್ಸ್, ಚಿಕ್ಕಬಳ್ಳಾಪುರದ ಅಜ್ಞಾತ ಸ್ಥಳದಲ್ಲಿ ಇರುವುದು ಖಚಿತವಾಗಿದೆ.

ಪೊಲೀಸರು ಅಲ್ಲಿಗೆ ಹೋದ ಕೂಡಲೇ ಈ ಡೆಡ್ಲಿ ಗ್ಯಾಂಗ್ ಮತ್ತೆ ಸ್ಥಳ ಬದಲಾಯಿಸಿದೆ. ನಾಪತ್ತೆಯಾದ ಅನಿತಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಒಬ್ಬರಿಂದ 30 ಸಾವಿರ ಹಣವನ್ನು ಸಾಲ ಪಡೆದಿದ್ದರು. ಈ ಸಾಲದ ಹಣ ಕೊಡಿ ಎಂದು ಇದೇ ಫೆಬ್ರವರಿ 2ರಂದು ತನ್ನ ಮನೆಗೆ ನಾಲ್ವರು ಬಂದು ಗಲಾಟೆ ಮಾಡಿದ್ದಾರೆ. ಇವರೇ ನನ್ನ ಪತ್ನಿಯನ್ನು ಕಿಡ್ನಾಪ್ ಮಾಡಿರಬಹುದು ಎಂದು ಅನಿತಾ ಪತಿ ಮಾದೇಶ್ ಆರೋಪಿಸುತ್ತಿದ್ದಾರೆ.

ಸಿಸಿಟಿವಿ ವಿಡಿಯೋವನ್ನ ಡಿಲೀಟ್ ಮಾಡಿದ ಪೊಲೀಸರು:
ಈ ಪ್ರಕರಣದಲ್ಲಿ ಯಲಹಂಕ ಪೊಲೀಸರ ನಡೆ, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ಆ ರಾತ್ರಿ ಅಪಹರಣಕಾರರು, ಅನಿತಾರನ್ನು ಕಿಡ್ನಾಪ್ ಮಾಡಿ ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ್ದ ಸಿಸಿಟಿವಿ ವಿಡಿಯೋವನ್ನು ಪೊಲೀಸರು ವಶಕ್ಕೆ ಪಡೆದು ಡಿಲೀಟ್ ಮಾಡಿದ್ದಾರೆ. ಅಂದಿನ ಘಟನೆಯ ಸಂಪೂರ್ಣ ವಿಡಿಯೋ ಪಕ್ಕದ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಪೊಲೀಸರು ಡಿವಿಆರ್ ಅನ್ನು ವಶಕ್ಕೆ ಪಡೆದು ಎಲ್ಲಾ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎಂದು ಮನೆ ಮಾಲೀಕ ಆರೋಪಿಸಿದ್ದಾರೆ. ಪೊಲೀಸರು ಸಿಸಿಟಿವಿ ವಿಡಿಯೋವನ್ನು ಡಿಲೀಟ್ ಮಾಡಿದ್ರೂ, ಮತ್ತೊಂದು ಕಡೆಯಿಂದ ಪಬ್ಲಿಕ್ ಟಿವಿ ತಂಡ ಈ ಸಿಸಿಟಿವಿ ವಿಡಿಯೋವನ್ನು ಕಲೆ ಹಾಕಿದೆ.

Comments

Leave a Reply

Your email address will not be published. Required fields are marked *