ಬೆಂಗ್ಳೂರಿನ ಓವೈಸಿ ಕಾರ್ಯಕ್ರಮದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ

ಬೆಂಗಳೂರು: ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಇಂದು ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ  ವೇದಿಕೆಯಲ್ಲೇ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಾಳೆ.

ವೇದಿಕೆ ಮೇಲೆ ಬಂದ ಚಿಕ್ಕಮಗಳೂರಿನ ಕೊಪ್ಪ ಮೂಲದ ಯುವತಿ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಾಳೆ. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದಾರೆ. ಬಳಿಕ ಪೊಲೀಸರು ಕೂಡಲೇ ಅಮೂಲ್ಯಳನ್ನು ವೇದಿಕೆಯಿಂದ ಕರೆದುಕೊಂಡು ವಶಕ್ಕೆ ಪಡೆದ್ದಾರೆ. ಅಮೂಲ್ಯ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡರು. ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದಾರೆ.

ಪಾಕಿಸ್ತಾನ ಪರ ಘೋಷಣೆ ಕೂಗಿದ ಬಳಿಕ ವೇದಿಕೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿ ಆಗಿದೆ. ಇದೇ ವೇಳೆ ಮಾತನಾಡಿದ ಓವೈಸಿ ನಾವೂ ಭಾರತೀಯರು, ನಾವೂ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವುದಿಲ್ಲ. ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ. ಪಾಕಿಸ್ತಾನಕ್ಕೆ ನಾವೂ ಜೈಕಾರ ಹಾಕಲ್ಲ. ನಾವು ಆಕೆಯನ್ನು ಕರೆದಿರಲಿಲ್ಲ. ಆಕೆ ಯಾಕೆ ಈ ರೀತಿ ಹೇಳಿದರು ಎಂಬುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾಕ್ ಪರ ಜೈಕಾರ ಕೂಗಿದ ಅಮೂಲ್ಯಳನ್ನು ಉಪ್ಪಾರ್‌ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆಕೆಯ ವಿರುದ್ಧ ದೇಶದ್ರೋಹ ಪ್ರಕರಣದಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್ 124ಎ, 153(ಎ) (ಬಿ) (ಸಿ), 505(2) ಅಡಿ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ. ಅಮೂಲ್ಯಳ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಡಿಯೋ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳಲಿದ್ದಾರೆ.

 

Comments

Leave a Reply

Your email address will not be published. Required fields are marked *