19 ವರ್ಷದ ಬಳಿಕ ಸಿಕ್ಕಿಬಿದ್ದ ಅಪಹರಣದ ಆರೋಪಿ

ಶಿವಮೊಗ್ಗ: ಯುವತಿಯ ಅಪಹರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಜಿಲ್ಲೆಯ ಜೋಗ ಪೊಲೀಸರು 19 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಗರ ತಾಲೂಕಿನ ಕಾರ್ಗಲ್‍ನ ಶಮಿ ಅಲಿಯಾಸ್ ಮೊಹಮ್ಮದ್ ಬಂಧಿತ ಆರೋಪಿ. ಈತ 2001 ರಲ್ಲಿ ಕುಂಸಿಯ 19 ವರ್ಷದ ಯುವತಿಯನ್ನು ಅಪಹರಿಸಿ ಕೆಲ ದಿನಗಳ ಕಾಲ ಯಾರಿಗೂ ತಿಳಿಯದಂತೆ ಅಜ್ಞಾತ ಸ್ಥಳದಲ್ಲಿ ಇರಿಸಿದ್ದ. ನಂತರ ಪ್ರಕರಣ ಪತ್ತೆ ಹಚ್ಚಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಆದರೆ ಆರೋಪಿಯು ನ್ಯಾಯಾಂಗ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಸಾಗರದ ನ್ಯಾಯಾಲಯವು 2005ರಲ್ಲಿ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಆರೋಪಿಯು ಕೇರಳದ ಮಣಪ್ಪುರಂ ಜಿಲ್ಲೆ ಕೊಟ್ಟಕಲ್‍ನಲ್ಲಿ ವಾಸವಾಗಿದ್ದ. ಅಲ್ಲಿಯೇ ಜೀವನ ಸಾಗಿಸುತ್ತಿದ್ದ. ಆದರೆ ಈ ಪ್ರಕರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಶತಾಯಗತಾಯ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲೇಬೇಕೆಂದು ಪೊಲೀಸರು ಪ್ರಯತ್ನ ನಡೆಸಿದ್ದರು. ಆಗ ಆರೋಪಿ ಕೇರಳದಲ್ಲಿ ತಲೆ ಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಜೋಗ ಪೊಲೀಸರು ಕೇರಳದ ಕೊಟ್ಟಕಲ್‍ಗೆ ತೆರಳಿದ್ದಾರೆ. ನಂತರ ಆರೋಪಿ ಪತ್ತೆಯಾಗಿದ್ದು, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *