ಪುಲ್ವಾಮಾ ದಾಳಿಯಿಂದ ಲಾಭ ಆಗಿದ್ದು ಯಾರಿಗೆ: ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಇಂದು ಇಡೀ ವಿಶ್ವಕ್ಕೆ ಪ್ರೇಮಿಗಳ ದಿನ, ಆದರೆ ಭಾರತಕ್ಕೆ ಮಾತ್ರ ಕರಾಳ ದಿನ. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಬರೋಬ್ಬರಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಬಲಿಯಾಗಿದ್ದರು. ಈ ದುರ್ಘಟನೆ ಆಗಿ ಒಂದು ವರ್ಷ ಆಗಿದೆ. ಈ ಕಹಿ ದಿನವನ್ನು ನೆನೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ದಾಳಿಯಿಂದ ಲಾಭವಾಗಿದ್ದು ಯಾರಿಗೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಈ ಕರಾಳ ದಿನದ ಬಗ್ಗೆ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ನಾವು ಇಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸುತ್ತಿದ್ದೇವೆ. ಈ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳೋಣ, ಈ ದಾಳಿಯಿಂದ ಯಾರಿಗೆ ಹೆಚ್ಚು ಲಾಭ ಆಯ್ತು? ದಾಳಿಯ ಕುರಿತು ನಡೆಸಿದ ತನಿಖೆಯ ಸತ್ಯಾಂಶ ಏನು? ದಾಳಿಗೆ ಅವಕಾಶ ನೀಡಿದ ಭದ್ರತಾ ವೈಫಲ್ಯಕ್ಕೆ ಬಿಜೆಪಿ ಸರ್ಕಾರದಲ್ಲಿ ಹೊಣೆಗಾರರು ಯಾರು ಎಂದು ಬರೆದು ಪುಲ್ವಾಮಾ ಹುತಾತ್ಮರನ್ನು ಇರಿಸಿದ್ದ ಫೋಟೋವನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ಕೇಸ್ – ಎನ್‍ಐಎ ತನಿಖೆ ಎಲ್ಲಿಯವರೆಗೆ ಬಂದಿದೆ? ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

ಏನಿದು ಪ್ರಕರಣ?
ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಹತ್ತಿರ ಆತ್ಮಾಹುತಿ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಜೈಷ್-ಇ-ಮೊಹಮ್ಮದ್ ಸಂಘಟನೆ ಉಗ್ರ ಆದಿಲ್ ಅಹ್ಮದ್ ದಾರ್, ಮಾರುತಿ ಇಕೋ ಕಾರ್ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸೈನಿಕರಿದ್ದ ವಾಹನದ ಮೇಲೆ ದಾಳಿ ಮಾಡಿದ್ದನು.

ಘಟನೆಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಕಾರ ಎನ್ನುವಂತೆ ಭಾರತೀಯ ವಾಯು ಪಡೆ ಬಾಲಕೋಟ್‍ನಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದ್ದೆವು.

ವ್ಯವಸ್ಥಿತವಾಗಿ ದಾಳಿಗೆ ಸ್ಕೆಚ್ ಹಾಕಿದ್ದ ಆದಿಲ್ ದಾರ್ ಕಾರಿನಲ್ಲಿ 300 ಕೆಜಿ ಗೂ ಹೆಚ್ಚು ಸ್ಫೋಟಕಗಳನ್ನು ತುಂಬಿಕೊಂಡು ಬಸ್ ಮೇಲೆ ದಾಳಿ ಮಾಡಿದ್ದ ಎಂದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿತ್ತು. ಘಟನೆಯ ಬಳಿಕ ಪ್ರತಿಕಾರದ ದೊಡ್ಡ ಕೂಗೇ ಕೇಳಿ ಬಂದಿತು. ಪಾಕ್ ಆಕ್ರಮಿತ ಕಾಶ್ಮೀರ ದಾಟಿ ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್ ಮಾಡುವ ಮೂಲಕ ಭಾರತೀಯ ಸೇನೆ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. 300ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದು ನಮ್ಮ ಯೋಧರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *