ಕೊರೊನಾ ವೈರಸ್ ಇದೆ ಎಂದು ತಿಳಿದು ವ್ಯಕ್ತಿ ಆತ್ಮಹತ್ಯೆ

– ತನ್ನ ಬಳಿ ಬರುತ್ತಿದ್ದ ಜನರಿಗೆ ಕಲ್ಲು ಹೊಡೆಯುತ್ತಿದ್ದ ವ್ಯಕ್ತಿ

ಹೈದರಾಬಾದ್: ತನಗೆ ಕೊರೊನಾ ವೈರಸ್ ಬಂದಿದೆ ಎಂದು ತಿಳಿದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಬಾಲಕೃಷ್ಣ(50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶೇಷಮ್ನಾಯುದಕಂಡ್ರಿಗ ಗ್ರಾಮದ ನಿವಾಸಿಯಾಗಿರುವ ಬಾಲಕೃಷ್ಣ ಹೃದಯ ಬಡಿತದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ತಿರುಪತಿಯ ರುಯಾ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ಬಾಲಕೃಷ್ಣ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಯಾವುದೋ ವೈರಸ್‍ನ ಲಕ್ಷಣ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರು ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆದಿದ್ದರು.

ಭಾನುವಾರ ಬಾಲಕೃಷ್ಣ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ. ಈ ವೇಳೆ ಕುಟುಂಬಸ್ಥರ ಬಳಿ, ನನಗೆ ಕೊರೊನಾ ವೈರಸ್ ಇದೆ. ನನ್ನ ಬಳಿ ಯಾರು ಬರಬೇಡಿ. ಯಾರು ನನ್ನ ಕೈಯನ್ನು ಸಹ ಹಿಡಿದುಕೊಳ್ಳಬೇಡಿ ಎಂದರು. ಅಲ್ಲದೆ ತನ್ನ ಬಳಿ ಬರುತ್ತಿದ್ದ ಜನರಿಗೆ ಕಲ್ಲು ಹೊಡೆದು ಮನೆಯೊಳಗೆ ಹೋಗುತ್ತಿದ್ದರು. ಬಾಲಕೃಷ್ಣ ಅವರ ಸ್ಥಿತಿಯನ್ನು ನೋಡಿದ ಕುಟುಂಬಸ್ಥರು ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿಲ್ಲ.

ಸೋಮವಾರ ಬಾಲಕೃಷ್ಣ ಮನೆಯಿಂದ ಹೊರ ಬಂದು ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು. ಮನೆಯಿಂದ ಹೊರಬಂದ ಬಾಲಕೃಷ್ಣ ಅವರನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯಗೊಂಡರು. ಬಾಲಕೃಷ್ಣ ಅವರ ಹೊಲದಲ್ಲಿ ತನ್ನ ತಾಯಿಯ ಸಮಾಧಿ ಬಳಿಯಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕೃಷ್ಣ ಅವರಿಗೆ ಪತ್ನಿ, ಮಗಳು ಹಾಗೂ ಇಬ್ಬರು ಮಗ ಇದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *