ಜನಪ್ರಿಯ ಯೋಜನೆಗಳೇ ಆಪ್ ಗೆಲುವಿಗೆ ಕಾರಣ: ಗೋವಿಂದ ಕಾರಜೋಳ

ಬಾಗಲಕೋಟೆ: ಜನಪ್ರಿಯ ಯೋಜನೆಗಳ ಘೋಷಣೆ ಆಮ್ ಆದ್ಮಿ ಪಕ್ಷ ಗೆಲುವಿಗೆ ಕಾರಣ ಎಂದು ಉಪಮುಖ್ಯಂತ್ರಿ ಗೋವಿಂದ ಕಾರಜೋಳ ಹೇಳಿದರು.

ದೆಹಲಿ ವಿಧಾನಸಭೆ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ವಿಶ್ಲೇಷಿಸುತ್ತಾ ಎಪಿಪಿ ನೀಡಿರುವ ಜನಪ್ರಿಯ ಯೋಜನೆಗಳು ಆ ಪಕ್ಷದ ಗೆಲುವಿಗೆ ಕಾರಣವಾಗಿದೆ. ಜನಪ್ರೀಯ ಯೋಜನೆಗಳು ಜನರ ಮನಸ್ಸು ಸೆಳೆದಿವೆ ಎಂದರು.

ದೇಶದ ವಿಷಯ ಬಂದಾಗ ದೇಶದ ಅಖಂಡತೆ, ರಾಷ್ಟ್ರೀಯತೆ ವಿಷಯ ಬಂದಾಗ ದೆಹಲಿಯ ಜನ ಬಿಜೆಪಿ ಬೆಂಬಲಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಜನಪ್ರಿಯ ಯೋಜನೆಗಳು ಘೋಷಣೆ ಮಾಡಿರುವ ಪರಿಣಾಮ ಅವುಗಳ ಅಧಿಕಾರಕ್ಕೆ ಬರಲು ಸಹಾಯವಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಆರ್ಥಿಕ ತೊಂದರೆ ಇರುವುದು ನಿಜವಾಗಿದ್ದರೂ ಸಿದ್ದರಾಮಯ್ಯ ಹೇಳಿರುವ ಹೇಳಿಕೆಯಿಂದ ತೊಂದರೆ ಇಲ್ಲ. ದರಿದ್ರತನ ಆರಂಭಗೊಂಡಿದ್ದೇ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಎಂದು ಆರೋಪಿಸಿದ ಅವರು, ಹೊಸ ಸಾಲ ತೆಗೆಯಲು ಬಾರದಷ್ಟು (ಬಾರೋಯಿಂಗ್ ಕೆಪ್ಯಾಸಿಟಿ ಮೀರಿ)ಸಾಲ ತೆಗೆದಿದ್ದಾರೆ. ಪ್ರಕೃತಿ ವಿಕೋಪ ಉಂಟಾಗಿ ಜನ ಮನೆಗಳು ಕಳೆದುಕೊಂಡಿದ್ದಾರೆ. ಬೆಳೆ ಹಾನಿ ಉಂಟಾಗಿದೆ. ಹಾಗಾಗಿ ಆರ್ಥಿಕ ತೊಂದರೆ ಆಗಿದೆ. ಸುಮಾರು 38 ಸಾವಿರ ಕೋಟಿ ರೂ. ನೆರೆ ಪರಿಹಾರಕ್ಕೆ ಖರ್ಚು ಮಾಡಲಾಗುತ್ತಿದೆ. ಪರಿಹಾರ ಹಂಚಿಕೆ, ರಸ್ತೆ, ಮನೆಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹಾಗಾಗಿ ತೊಂದರೆ ಕಾಣಿಸಿಕೊಂಡಿದೆ ಎಂದರು.

ಅಕ್ರಮ ಮರಳು ಗಣಿಗಾರಿಕೆ ಯಾರು ಮಾಡುತ್ತಿದ್ದಾರೆ ಎನ್ನುವುದರ ಮೇಲೆ ನಿಗಾ ಇಡಲಾಗಿದೆ. ಜನತೆಗೆ ಮರಳು ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

Comments

Leave a Reply

Your email address will not be published. Required fields are marked *