ಹಾಯ್ ಹೇಳಿದ್ದಾಗ ನಿನ್ನ ಮುಖದಲ್ಲಿದ್ದ ನಗು ಮರೆಯಲು ಸಾಧ್ಯವಿಲ್ಲ: ಗಣೇಶ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 12ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಪತ್ನಿ ಶಿಲ್ಪಾ ಗಣೇಶ್ ಜೊತೆಗಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಅಂದು ನಾನು ಹಾಯ್ ಎಂದಾಗ ನೀನು ನನಗೆ ಹಾಯ್ ಎಂದು ಹೇಳಿದ್ದೆ. ಆ ದಿನ ನಿನ್ನ ಮುಖದಲ್ಲಿದ್ದ ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿಗೆ ನಮ್ಮ ಮದುವೆಯಾಗಿ 12 ವರ್ಷಗಳೇ ಕಳೆದಿವೆ. ನೀನು ನನ್ನ ಪ್ರೀತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಮಹಾರಾಣಿ. ನನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

2008, ಫೆಬ್ರವರಿ 11ರಂದು ತಮ್ಮ ಜೆಪಿ ನಗರದ ನಿವಾಸದಲ್ಲಿಯೇ ಗಣೇಶ್ ಹಾಗೂ ಶಿಲ್ಪಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೆ. 18ರಂದು ಗಣೇಶ್ ಅವರ ಮದುವೆ ನಿಗದಿಯಾಗಿತ್ತು. ಆದರೆ ಅಭಿಮಾನಿಗಳ ಒತ್ತಡದಿಂದ ಗಣೇಶ್ ಹಾಗೂ ಶಿಲ್ಪಾ ಫೆ. 11ರಂದು ಜೆಪಿ ನಗರದ ಮನೆಯಲ್ಲಿಯೇ ಮದುವೆಯಾಗಿದ್ದರು. ಇವರಿಬ್ಬರ ಮದುವೆಗೆ ನಿರ್ದೇಶಕ ಯೋಗರಾಜ್ ಭಟ್, ನಾಗಶೇಖರ್, ನಿರ್ಮಾಪಕ ಕೆ. ಮಂಜು ಹಾಗೂ ಶಿಲ್ಪಾ ಅವರ ಆತ್ಮೀಯ ಸಂಬಂಧಿಕರು ಹಾಜರಿದ್ದರು.

ಗಣೇಶ್ ಹಾಗೂ ಶಿಲ್ಪಾ ದಂಪತಿಗೆ ಮಗಳು ಚರಿತ್ರ್ಯ ಹಾಗೂ ಮಗ ವಿಹಾನ್ ಇದ್ದಾರೆ. ಗಣೇಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಬ್ಬರ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Comments

Leave a Reply

Your email address will not be published. Required fields are marked *